ಟ್ರಾಫಿಕ್ ಸಿಗ್ನಲ್‌ಗಳು, ರೈಲುಗಳು, ಬಸ್ ನಿಲ್ದಾಣಗಳು ಅಥವಾ ಜನನಿಬಿಡ ಬೀದಿ ಬದಿಗಳಲ್ಲಿ ನಾವು ಅನೇಕ ಬಾರಿ ಮಂಗಳಮುಖಿಯರನ್ನು ಅಥವಾ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ನೋಡುತ್ತಿರುತ್ತೇವೆ. ಇವರನ್ನು ನೋಡಿದಾಗ ಕೆಲವರಲ್ಲಿ ಕನಿಕರ ಹುಟ್ಟಿದರೆ, ಇನ್ನು ಕೆಲವರಲ್ಲಿ ಅಸಡ್ಡೆ ಮೂಡುವುದು ಸಹಜ. ಆದರೆ, ಸಮಾಜದ ಮುಖ್ಯವಾಹಿನಿಯಿಂದ ದಶಕಗಳ ಕಾಲ ದೂರ ಉಳಿದು, ನಿರಂತರ ಅವಮಾನ, ಅಸ್ಪೃಶ್ಯತೆ ಮತ್ತು ಕಠಿಣ ಜೀವನದ ನೋವನ್ನು ನುಂಗಿಕೊಂಡಿರುವ ಈ ಸಮುದಾಯಗಳ ಸಂಕಷ್ಟದ ಅರಿವು ನಮಗಿರುವುದು ಕಡಿಮೆ. ಶಿಕ್ಷಣ, ಉದ್ಯೋಗ ಮತ್ತು ಸೂರಿನ ಕೊರತೆಯಿಂದಾಗಿ ಬೀದಿಯಲ್ಲೇ ಹುಟ್ಟಿ ಬೀದಿಯಲ್ಲೇ ಕೊನೆಯಾಗುವ ಅದೆಷ್ಟೋ ಜೀವಗಳ ಆಕ್ರಂದನ ಈಗ ಸರ್ಕಾರದ ಕಿವಿಗೆ ಬಿದ್ದಿದೆ. ಈ ನಿರ್ಲಕ್ಷಿತ ಸಮುದಾಯಗಳ ಬದುಕಿಗೆ ಬೆಳಕಿನ ಆಶಾಕಿರಣವಾಗಿ ಬಂದಿದೆ ಕೇಂದ್ರ ಸರ್ಕಾರದ ಐತಿಹಾಸಿಕ 'ಸ್ಮೈಲ್' (SMILE) ಯೋಜನೆ.

ಪರಿಕಲ್ಪನೆ ಮತ್ತು ಉದ್ದೇಶ
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2022ರ ಫೆಬ್ರವರಿ 12ರಂದು "ಸ್ಮೈಲ್ - ಜೀವನೋಪಾಯ ಮತ್ತು ಉದ್ಯಮಕ್ಕಾಗಿ ಅಂಚಿನಲ್ಲಿರುವ ವ್ಯಕ್ತಿಗಳಿಗೆ ಬೆಂಬಲ" (Support for Marginalized Individuals for Livelihood and Enterprise) ಎಂಬ ವಿಶೇಷ ಯೋಜನೆಯನ್ನು ಪ್ರಾರಂಭಿಸಿತು. ಇದು ಕೇವಲ ಒಂದು ಸರ್ಕಾರಿ ಯೋಜನೆಯಲ್ಲ, ಬದಲಾಗಿ ಅಂಚಿಗೆ ತಳ್ಳಲ್ಪಟ್ಟ ಜೀವಗಳ ಮುಖದಲ್ಲಿ ನೈಜ 'ನಗುವನ್ನು' (Smile) ತರುವ ಪ್ರಯತ್ನವಾಗಿದೆ.
ಈ ಯೋಜನೆಯು ಎರಡು ಪ್ರಮುಖ ಉಪ-ವಿಭಾಗಗಳನ್ನು ಹೊಂದಿದೆ:
- ಮಂಗಳಮುಖಿಯರ ಸಮಗ್ರ ಪುನರ್ವಸತಿಗಾಗಿ ಕೇಂದ್ರ ವಲಯ ಯೋಜನೆ.
- ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಮಗ್ರ ಪುನರ್ವಸತಿಗಾಗಿ ಕೇಂದ್ರ ವಲಯ ಯೋಜನೆ.
ಆರ್ಥಿಕ ಬಲ ಮತ್ತು ಬದ್ಧತೆ
ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು ಮತ್ತು ಘನತೆಯಿಂದ ಬದುಕುವ ಅವಕಾಶವನ್ನು ನೀಡಿದೆ. ಆದರೆ ವಾಸ್ತವದಲ್ಲಿ ಈ ಸಮುದಾಯಗಳ ಸ್ಥಿತಿಗತಿ ತೀರ ಕಳಪೆ ಮಟ್ಟದಲ್ಲಿದೆ. ಈ ಅಂತರವನ್ನು ಅಳಿಸಿಹಾಕಲು ಸರ್ಕಾರವು 2021-22 ರಿಂದ 2025-26ರ ಅವಧಿಗೆ ಬರೋಬ್ಬರಿ 365 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಇದರಲ್ಲಿ ಮಂಗಳಮುಖಿಯರ ಅಭಿವೃದ್ಧಿಗೆ 265 ಕೋಟಿ ರೂ. ಮತ್ತು ಭಿಕ್ಷುಕರ ಪುನರ್ವಸತಿಗಾಗಿ 100 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಈ ಅನುದಾನವು ಕೇವಲ ಆರ್ಥಿಕ ನೆರವಿಗೆ ಸೀಮಿತವಾಗದೆ, ಶಿಕ್ಷಣ, ಕೌಶಲ್ಯ ತರಬೇತಿ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅವರನ್ನು ಸಮಾಜದ ಗೌರವಾನ್ವಿತ ಪ್ರಜೆಗಳನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.
ಶಿಕ್ಷಣವೇ ಯಾವುದೇ ಸಮುದಾಯದ ಉನ್ನತಿಗೆ ಅಡಿಪಾಯ. ಮಂಗಳಮುಖಿ ಮಕ್ಕಳು ಶಾಲೆಯಲ್ಲಿ ಎದುರಿಸುವ ಹೀಯಾಳಿಕೆಗಳಿಂದಾಗಿ ಶಿಕ್ಷಣವನ್ನು ಅರ್ಧದಲ್ಲೇ ಬಿಡುತ್ತಿದ್ದರು. ಇದನ್ನು ತಪ್ಪಿಸಲು, 'ಸ್ಮೈಲ್' ಯೋಜನೆಯ ಅಡಿಯಲ್ಲಿ 9ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ವ್ಯಾಸಂಗ ಮಾಡುವ ಮಂಗಳಮುಖಿ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿ ವೇತನವನ್ನು ಪರಿಚಯಿಸಲಾಗಿದೆ. ಯಾವುದೇ ವೃತ್ತಿಪರ ಅಥವಾ ತಾಂತ್ರಿಕ ಕೋರ್ಸ್‌ಗಳಿಗೆ ಈ ಸ್ಕಾಲರ್‌ಶಿಪ್ ಅನ್ವಯವಾಗುತ್ತದೆ.
ಅಷ್ಟೇ ಅಲ್ಲದೆ, ಮಂಗಳಮುಖಿಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ದೇಶಾದ್ಯಂತ 18 ವಿಶಿಷ್ಟ ಉದ್ಯಮಶೀಲತಾ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ಸುಮಾರು 1,800ಕ್ಕೂ ಹೆಚ್ಚು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಈಗಾಗಲೇ ಬ್ಯಾಂಕ್ ಸಾಲ ಪಡೆಯುವಿಕೆ, ಮಾರುಕಟ್ಟೆ ವಿಶ್ಲೇಷಣೆ ಮತ್ತು ಆರ್ಥಿಕ ನಿರ್ವಹಣೆಯ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಇದು ಅವರ ಬದುಕಿನಲ್ಲಿ ಉಂಟಾದ 'ಮೌನ ಕ್ರಾಂತಿ' ಎಂದೇ ವಿಶ್ಲೇಷಿಸಲಾಗುತ್ತಿದೆ.
ಭಿಕ್ಷಾಟನೆಯ ಪಿಡುಗನ್ನು ನಿರ್ಮೂಲನೆ ಮಾಡುವುದು ದೇಶದ ಆರ್ಥಿಕತೆಗೆ ಅನಿವಾರ್ಯವಾಗಿದೆ. ಸ್ಮೈಲ್ ಯೋಜನೆಯಡಿಯಲ್ಲಿ ಭಿಕ್ಷುಕರನ್ನು ರಕ್ಷಿಸಿ, ಅವರಿಗೆ ಕೌನ್ಸಿಲಿಂಗ್ ನೀಡಲಾಗುತ್ತಿದೆ. ವಯೋವೃದ್ಧರು, ದೈಹಿಕ ವಿಕಲಚೇತನರು ಅಥವಾ ಅನಾಥ ಮಕ್ಕಳು ಭಿಕ್ಷಾಟನೆಯ ಜಾಲಕ್ಕೆ ಸಿಲುಕದಂತೆ ನೋಡಿಕೊಳ್ಳಲು ಸರ್ಕಾರ ಕಾರ್ಯೋನ್ಮುಖವಾಗಿದೆ. ರಕ್ಷಿಸಲ್ಪಟ್ಟವರಿಗೆ ಆಹಾರ, ಆಶ್ರಯ ಮತ್ತು ವೈದ್ಯಕೀಯ ಚಿಕಿತ್ಸೆ ನೀಡಿ, ಅವರ ಸಾಮರ್ಥ್ಯಕ್ಕೆ ತಕ್ಕಂತೆ ವೃತ್ತಿ ಕೌಶಲ್ಯ ಕಲಿಸಿ ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ. ಸಾರ್ವಜನಿಕರೂ ಕೂಡ ಈ ಭಿಕ್ಷಾಟನೆ ಮುಕ್ತ ಭಾರತ ನಿರ್ಮಾಣದಲ್ಲಿ ಸಹಕರಿಸುವಂತೆ ಸರ್ಕಾರ ಮನವಿ ಮಾಡಿದೆ.
ಮಂಗಳಮುಖಿಯರ ಮೇಲಿನ ದೌರ್ಜನ್ಯ ಮತ್ತು ತಾರತಮ್ಯವನ್ನು ತಡೆಯಲು 'ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019' ಕವಚವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಾಯ್ದೆಯು ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ತಾರತಮ್ಯ ಎಸಗಿದರೆ ಕನಿಷ್ಠ 2 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸುವ ಅವಕಾಶ ಹೊಂದಿದೆ. ದೇಶಾದ್ಯಂತ ಟ್ರಾನ್ಸ್‌ಜೆಂಡರ್ ಪ್ರೊಟೆಕ್ಷನ್ ಸೆಲ್‌ಗಳನ್ನು ಮತ್ತು 25 ರಾಜ್ಯಗಳಲ್ಲಿ ವೆಲ್ಫೇರ್ ಬೋರ್ಡ್‌ಗಳನ್ನು ರಚಿಸಲಾಗಿದೆ.
ಜೊತೆಗೆ, ಆಸರೆ ಇಲ್ಲದ ಮಂಗಳಮುಖಿಯರಿಗಾಗಿ 'ಗರಿಮಾ ಗೃಹ' (Garima Greh) ಎಂಬ ವಿಶೇಷ ಆಶ್ರಯ ತಾಣಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಅವರಿಗೆ ವಸತಿ, ಊಟ ಮತ್ತು ತರಬೇತಿ ಉಚಿತವಾಗಿ ನೀಡಲಾಗುತ್ತಿದೆ. ಇದು ಅವರಿಗೆ ಸಮಾಜದಲ್ಲಿ ಘನತೆಯಿಂದ ಬದುಕಲು ಆತ್ಮವಿಶ್ವಾಸವನ್ನು ತುಂಬಿದೆ.
ಭಾರತವು ವಂಚಿತ ಸಮುದಾಯಗಳನ್ನು ಮೇಲೆತ್ತುವ ಮೂಲಕ ಅಂತರ್ಗತ ಅಭಿವೃದ್ಧಿಯತ್ತ (Inclusive Development) ಹೆಜ್ಜೆ ಹಾಕುತ್ತಿದೆ. ಸ್ಮೈಲ್ ಯೋಜನೆಯು ಕೇವಲ ಒಂದು ಸರ್ಕಾರಿ ದಾಖಲೆಯಾಗಿ ಉಳಿಯದೆ, ಸಾವಿರಾರು ಮಂದಿಯ ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತಿದೆ. ಮಂಗಳಮುಖಿಯರು ಮತ್ತು ಭಿಕ್ಷುಕರು ನಮ್ಮ ಸಮಾಜದ ಅಂಗಗಳು. ಅವರಿಗೆ ಸಹಾನುಭೂತಿಗಿಂತ ಹೆಚ್ಚಾಗಿ ಸಮಾನ ಅವಕಾಶಗಳ ಅಗತ್ಯವಿದೆ. ಸರ್ಕಾರ ರೂಪಿಸಿರುವ ಈ ಯೋಜನೆ, ಮುಂಬರುವ ದಿನಗಳಲ್ಲಿ ಅರ್ಹರೆಲ್ಲರಿಗೂ ತಲುಪಲಿ ಮತ್ತು ಅವರ ಕಣ್ಣೀರಿನ ಕಥೆಗಳು ಆನಂದದ ನಗೆಯಾಗಿ ಬದಲಾಗಲಿ ಎಂಬುದು ಪ್ರತಿಯೊಬ್ಬ ನಾಗರಿಕನ ಆಶಯ.
Comments
Please to leave a comment on this article.