Gold 24k: ₹14,395 0
Gold 22k: ₹13,195 0
Gold 18k: ₹10,795 0
Silver 10g: ₹2,300 0
Sensex: 78,428.95 (-0.27%)
Nifty: 24,614.90 (-0.64%)
Gold 24k: ₹14,395 0
Gold 22k: ₹13,195 0
Gold 18k: ₹10,795 0
Silver 10g: ₹2,300 0
Sensex: 78,428.95 (-0.27%)
Nifty: 24,614.90 (-0.64%)

ಸರ್ಕಾರದ ಆದಾಯ ಮಿತಿ ಅಡ್ಡಗಾಲು - ಜಿಲ್ಲೆಯಲ್ಲಿ 18 ಸಾವಿರಕ್ಕೂ ಅಧಿಕ ಫಲಾನುಭವಿಗಳ ಪಿಂಚಣಿ ಸ್ಥಗಿತ!!

ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಜೀವನ ನಡೆಸುತ್ತಿದ್ದ ಜಿಲ್ಲೆಯ ಸಾವಿರಾರು ಬಡ ಫಲಾನುಭವಿಗಳಿಗೆ ಈಗ ಸರ್ಕಾರದ ಹೊಸ ಆದಾಯ ಮಿತಿಯ ನಿಯಮಗಳು ಬಿರುಗಾಳಿಯಾಗಿ ಪರಿಣಮಿಸಿವೆ. ಕಳೆದ ಮೂರು ತಿಂಗಳಿಂದ ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಪಿಂಚಣಿ ಹಣ ಕೈಸೇರದೆ ಇರುವುದರಿಂದ, ದೈನಂದಿನ ಜೀವನ ನಡೆಸುವುದು ದುಸ್ತರವಾಗಿದೆ. ಔಷಧೋಪಚಾರ, ಊಟದ ವೆಚ್ಚ ಸೇರಿದಂತೆ ದಿನನಿತ್ಯದ ಅಗತ್ಯಗಳಿಗಾಗಿ ಈ ಮಾಸಾಶನವನ್ನೇ ನಂಬಿಕೊಂಡಿದ್ದ ಸಾವಿರಾರು ಜನತೆ ಈಗ ಸರ್ಕಾರದ ಕಠಿಣ ನಿಯಮಗಳಿಂದಾಗಿ ಬೀದಿಗೆ ಬೀಳುವಂತಾಗಿದೆ.

CANVA

ವಿವಿಧ ಯೋಜನೆಗಳಡಿ ಪಿಂಚಣಿ ಪಡೆಯುತ್ತಿದ್ದ ಆಸರೆಗಳು

ಜಿಲ್ಲೆಯಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ, ವಿಧವಾ ಪಿಂಚಣಿ ಯೋಜನೆ, ಅಂಗವಿಕಲ ಪಿಂಚಣಿ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ, ಮೈತ್ರಿ ಸೇರಿದಂತೆ ಹಲವು ಮಾನವೀಯ ಯೋಜನೆಗಳ ಮೂಲಕ ಸಾವಿರಾರು ಜನ ಪ್ರತಿ ತಿಂಗಳು ನೆರವು ಪಡೆಯುತ್ತಿದ್ದಾರೆ. ಇದಲ್ಲದೆ ಸಾಲದ ಬಾಧೆಯಿಂದ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರ ಪಿಂಚಣಿ ಯೋಜನೆ, ಆ್ಯಸಿಡ್‌ ದಾಳಿಗೆ ಒಳಗಾದ ಹೆಣ್ಣುಮಕ್ಕಳಿಗೆ ನೀಡುವ ಪಿಂಚಣಿ, ಎಂಡೋಸಲ್ಫಾನ್‌ ಸಂತ್ರಸ್ತರಿಗೆ ಒದಗಿಸುವ ಮಾಸಿಕ ಪಿಂಚಣಿ ಹಾಗೂ ವಿಮುಕ್ತ ದೇವದಾಸಿಯರ ಮಾಸಾಶನ ಯೋಜನೆಗಳೂ ಜಿಲ್ಲೆಯಲ್ಲಿ ಜಾರಿಯಲ್ಲಿವೆ.

ಈ ಯೋಜನೆಗಳ ಮೂಲಕ ಅನೇಕ ಅಸಹಾಯಕರ ಕುಟುಂಬಗಳು ಸ್ವಾವಲಂಬಿಗಳಾಗಿ, ಗೌರವಯುತವಾಗಿ ದೈನಂದಿನ ಜೀವನ ನಡೆಸಲು ಸಾಧ್ಯವಾಗಿತ್ತು. ಯಾರದೋ ಮುಂದೆ ಕೈಚಾಚದೆ ಬದುಕುತ್ತಿದ್ದ ಹಿರಿಯ ಜೀವಗಳಿಗೆ ಈ ಮಾಸಾಶನವೇ ದೊಡ್ಡ ಆಸರೆಯಾಗಿತ್ತು. ಆದರೆ ಇತ್ತೀಚಿನ ಸರ್ಕಾರದ ಕಠಿಣ ಕ್ರಮಗಳಿಂದಾಗಿ ಈ ಆಸರೆಗೆ ಕಲ್ಲು ಬಿದ್ದಂತಾಗಿದೆ.

ಕಳೆದ ಮೂರು ತಿಂಗಳಿಂದ ಸ್ಥಗಿತಗೊಂಡ ಮಾಸಾಶನ: 18 ಸಾವಿರಕ್ಕೂ ಅಧಿಕ ಮಂದಿ ಸಂಕಷ್ಟದಲ್ಲಿ

ಜಿಲ್ಲೆಯಲ್ಲಿ ಪಿಂಚಣಿ ಪಡೆಯುವ ಒಟ್ಟು ಫಲಾನುಭವಿಗಳ ಪೈಕಿ 18 ಸಾವಿರಕ್ಕೂ ಅಧಿಕ ನಾನಾ ಪಿಂಚಣಿದಾರರ ಮಾಸಾಶನ ಕಳೆದ ಮೂರ್ನಾಲ್ಕು ತಿಂಗಳಿಂದ ಏಕಾಏಕಿ ಸ್ಥಗಿತಗೊಂಡಿದೆ. ನಸುಕಿನ ವೇಳೆಯಲ್ಲಿಯೇ ನೆಮ್ಮದಿ ಕೇಂದ್ರಗಳು, ತಹಸೀಲ್ದಾರ್‌ ಕಚೇರಿಗಳು ಹಾಗೂ ಗ್ರಾಮ ಒನ್ ಕೇಂದ್ರಗಳ ಮುಂದೆ ವೃದ್ಧರು, ವಿಧವೆಯರು ಹಾಗೂ ವಿಶೇಷಚೇತನರು ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯಗಳು ಜಿಲ್ಲೆಯಾದ್ಯಂತ ಸಾಮಾನ್ಯವಾಗಿದೆ.

"ತಿಂಗಳಿಡೀ ಕಾಯ್ದರೂ ಬ್ಯಾಂಕ್ ಖಾತೆಗೆ ಹಣ ಬರುತ್ತಿಲ್ಲ. ವಿಚಾರಿಸಲು ಹೋದರೆ ಆದಾಯ ಪ್ರಮಾಣ ಪತ್ರ ತರಲು ಹೇಳುತ್ತಿದ್ದಾರೆ. ಈ ಇಳಿವಯಸ್ಸಿನಲ್ಲಿ ಕಚೇರಿಗಳಿಂದ ಕಚೇರಿಗೆ ಅಲೆಯುವ ಶಕ್ತಿ ನಮಗಿಲ್ಲ," ಎಂದು ವೃದ್ಧರೊಬ್ಬರು ಕಣ್ಣೀರು ಹಾಕಿದ್ದಾರೆ.

ಮರಳಿ ಮಾಸಾಶನವನ್ನು ಸಕ್ರಿಯಗೊಳಿಸಲು ಸರ್ಕಾರ ನಿಗದಿಪಡಿಸಿರುವ ಹೊಸ ಆದಾಯ ಪ್ರಮಾಣಪತ್ರವನ್ನು ಮತ್ತೊಮ್ಮೆ ಸಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದಕ್ಕಾಗಿ ವೃದ್ಧರು ಅಗತ್ಯ ದಾಖಲೆಗಳ ಹಿಡಿದು ದಿನವಿಡೀ ಅಲೆಯುತ್ತಿದ್ದಾರೆ.

ತಾಂತ್ರಿಕ ದೋಷ ಹಾಗೂ ಕಚೇರಿಗಳ ಅಲೆದಾಟದ ನರಕಯಾತನೆ

ಹೊಸದಾಗಿ ಆದಾಯ ಪ್ರಮಾಣ ಪತ್ರ ಪಡೆಯಲು ನೆಮ್ಮದಿ ಕೇಂದ್ರಗಳಿಗೆ ತೆರಳುವ ಜನರಿಗೆ ಅಲ್ಲಿ ಮತ್ತೊಂದು ರೀತಿಯ ತೊಂದರೆ ಕಾಯುತ್ತಿದೆ.

ಸರ್ವರ್ ಸಮಸ್ಯೆ: ಸದಾ ಕಾಲ ಕಾಡುವ ಸರ್ವರ್‌ ಸಮಸ್ಯೆ ಮತ್ತು ತಾಂತ್ರಿಕ ಲೋಪಗಳಿಂದಾಗಿ ಸಾರ್ವಜನಿಕರು ಗಂಟೆಗಟ್ಟಲೆ ಕಾಯಬೇಕಾಗಿದೆ.

ಒಟಿಪಿ ವಿಳಂಬ: ಮೊಬೈಲ್‌ ಸಂಖ್ಯೆಗಳಿಗೆ ಒಟಿಪಿ (OTP) ಬರುವುದು ತಡವಾಗುವುದರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.

ಅಧಿಕಾರಿಗಳ ಸಹಿಗಾಗಿ ಅಲೆದಾಟ: ಗ್ರಾಮ ಆಡಳಿತಾಧಿಕಾರಿ (VA) ಹಾಗೂ ಕಂದಾಯ ನಿರೀಕ್ಷಕರಿಂದ (RI) ಅರ್ಜಿಯಲ್ಲಿ ಬರೆಸಿಕೊಂಡು ಬರಬೇಕಾಗಿರುವುದರಿಂದ, ವೃದ್ಧರು ತಹಸೀಲ್ದಾರ್‌ ಕಚೇರಿಯಿಂದ ನೆಮ್ಮದಿ ಕೇಂದ್ರದವರೆಗೆ ಹತ್ತಾರು ಬಾರಿ ಅಲೆಯುವಂತಾಗಿದೆ. ನಡೆಯಲು ಸಾಧ್ಯವಾಗದ ವಿಶೇಷಚೇತನರು ಹಾಗೂ ವೃದ್ಧರು ಬೇರೆಯವರ ಸಹಾಯ ಪಡೆದು ಕಚೇರಿ ಮೆಟ್ಟಿಲು ಹತ್ತುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಧಿಕಾರಿಗಳ ವಿರುದ್ಧ ಆಕ್ರೋಶ

ಜಿಲ್ಲೆಯಲ್ಲಿ ಈಗಾಗಲೇ 1.20 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿರುವ 11,590 ಬಿಪಿಎಲ್‌ (BPL) ಕಾರ್ಡ್‌ಗಳನ್ನು ಎಪಿಎಲ್‌ (APL) ಕಾರ್ಡ್‌ಗಳಾಗಿ ಪರಿವರ್ತಿಸಲಾಗಿದೆ. ಪ್ರಸ್ತುತ ಮಾಸಾಶನ ಸ್ಥಗಿತಗೊಂಡ ಪಿಂಚಣಿದಾರರಿಗೆ ವಾರ್ಷಿಕ ಆದಾಯ ಮಿತಿಯನ್ನು ಕೇವಲ 32 ಸಾವಿರ ರೂ. ಎಂದು ನಿಗದಿಪಡಿಸಲಾಗಿದೆ.

ಆದರೆ, ಈ ಆದಾಯ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಯಲ್ಲಿ ತಹಸೀಲ್ದಾರ್ ಕಚೇರಿಗಳಲ್ಲಿ ಯಾವುದೇ ಸೂಕ್ತ ಪರಿಶೀಲನೆ ನಡೆಯುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ, ನೈಜ ಮಾಹಿತಿ ಪಡೆಯದೆ ಮನಸೋಇಚ್ಛೆ ಆದಾಯವನ್ನು ನಮೂದಿಸಿ ಕೊಡುತ್ತಿದ್ದಾರೆ. ಆದಾಯ ಪ್ರಮಾಣ ಪತ್ರದಲ್ಲಿ ವಾರ್ಷಿಕ 5 ಸಾವಿರ, 10 ಸಾವಿರ, 20 ಸಾವಿರ ರೂಪಾಯಿ ಹೀಗೆ 32 ಸಾವಿರ ರೂ. ಒಳಗಡೆ ತಮಗೆ ತೋಚಿದಂತೆ ಅಧಿಕಾರಿಗಳೇ ಅಂಕಿ-ಅಂಶಗಳನ್ನು ನಮೂದಿಸಿ ಪ್ರಮಾಣ ಪತ್ರ ನೀಡುತ್ತಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಜಿಲ್ಲಾಡಳಿತ ಹಾಗೂ ಹಿರಿಯ ಅಧಿಕಾರಿಗಳ ಭರವಸೆ

ಈ ಗಂಭೀರ ಸಮಸ್ಯೆಯ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲೆಯ ಹಿರಿಯ ಅಧಿಕಾರಿಗಳು, ಅರ್ಹ ಫಲಾನುಭವಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ.

"ಜಿಲ್ಲೆಯಲ್ಲಿ 18 ಸಾವಿರಕ್ಕೂ ಅಧಿಕ ಪಿಂಚಣಿದಾರರಿಗೆ ಮಾಸಿಕ ಪಿಂಚಣಿ ಬರುವುದು ಸ್ಥಗಿತಗೊಂಡಿರುವುದು ನಿಜ. ಅಂತಹವರು ನಿಗದಿತ ಆದಾಯ ಪ್ರಮಾಣ ಪತ್ರದ ಜತೆಗೆ ಅಗತ್ಯ ದಾಖಲೆಗಳನ್ನು ಮರು ಸಲ್ಲಿಸಬೇಕಾಗಿದೆ. ವಿಶೇಷಚೇತನರು, ವೃದ್ಧರು ಸೇರಿದಂತೆ ನೈಜ್ಯ ಫಲಾನುಭವಿಗಳಿಗೆ ಯಾವುದೇ ವಿಳಂಬವಾಗದಂತೆ ಆದಷ್ಟು ಬೇಗ ಅಗತ್ಯ ದಾಖಲೆಗಳನ್ನು ಒದಗಿಸಲು ಎಲ್ಲ ತಾಲೂಕಿನ ತಹಸೀಲ್ದಾರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಆದಾಯ ತೆರಿಗೆ ಪಾವತಿದಾರರು ಹಾಗೂ ನಿಗದಿತ ಆದಾಯಕ್ಕಿಂತ ಹೆಚ್ಚಿನ ಸೌಲಭ್ಯ ಹೊಂದಿರುವ ಜನರಿಗೆ ಯಾವುದೇ ಕಾರಣಕ್ಕೂ ಪಿಂಚಣಿ ಬರುವುದಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.

Pension Stopped

Comments

Sign in to comment
Please to leave a comment on this article.
Subscribe to Our Newsletter

Get the latest articles delivered to your inbox.

Popular News

Related Articles

Leopard Attacks Forest Officer During Rescue in Karnataka!
Leopard Attacks Forest Officer During Rescue in Karnataka!