Gold 24k: ₹14,395 0
Gold 22k: ₹13,195 0
Gold 18k: ₹10,795 0
Silver 10g: ₹2,300 0
Sensex: 78,428.95 (-0.27%)
Nifty: 24,614.90 (-0.64%)
Gold 24k: ₹14,395 0
Gold 22k: ₹13,195 0
Gold 18k: ₹10,795 0
Silver 10g: ₹2,300 0
Sensex: 78,428.95 (-0.27%)
Nifty: 24,614.90 (-0.64%)

ಜಾನ್ಸನ್ & ಜಾನ್ಸನ್ ಬಿಲಿಯನ್ ಡಾಲರ್ ರಾಜಿ - ಕ್ಯಾನ್ಸರ್ ದಾವೆ ಇತ್ಯರ್ಥಕ್ಕೆ ₹46,000 ಕೋಟಿ ಪಾವತಿ!!

ವಿಶ್ವಪ್ರಸಿದ್ಧ ವೈದ್ಯಕೀಯ ಮತ್ತು ಗೃಹಬಳಕೆಯ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ಜಾನ್ಸನ್ ಅಂಡ್ ಜಾನ್ಸನ್ (Johnson & Johnson), ತನ್ನ ಬೇಬಿ ಪೌಡರ್ ಮತ್ತು ಇತರ ಟಾಲ್ಕ್ (Talc) ಆಧಾರಿತ ಉತ್ಪನ್ನಗಳು ಅಂಡಾಶಯದ ಕ್ಯಾನ್ಸರ್ (Ovarian Cancer) ಉಂಟುಮಾಡುತ್ತವೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಸಾವಿರಾರು ಮೊಕದ್ದಮೆಗಳನ್ನು ಇತ್ಯರ್ಥಪಡಿಸಲು ಬೃಹತ್ ರಾಜಿ ಸೂತ್ರವೊಂದಕ್ಕೆ ಮುಖ ಮಾಡಿದೆ. ಈ ಐತಿಹಾಸಿಕ ಒಪ್ಪಂದದ ಭಾಗವಾಗಿ ಸಂಸ್ಥೆಯು 5.5 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 46,000 ಕೋಟಿ ರೂಪಾಯಿಗಿಂತಲೂ ಹೆಚ್ಚು) ಪಾವತಿಸಲು ಒಪ್ಪಿಕೊಂಡಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

AI

ಈ ಮಹತ್ವದ ನಿರ್ಧಾರವು ಕಂಪನಿಯ ವಿರುದ್ಧ ವರ್ಷಗಳಿಂದ ನಡೆದುಕೊಂಡು ಬಂದಿದ್ದ ಅತ್ಯಂತ ವಿವಾದಾತ್ಮಕ ಹಾಗೂ ಸಂಕೀರ್ಣ ಕಾನೂನು ಹೋರಾಟಕ್ಕೆ ಅಂತಿಮ ತೆರೆ ಎಳೆಯುವ ದಾರಿಯನ್ನು ಸುಗಮಗೊಳಿಸಿದೆ.

69,000ಕ್ಕೂ ಹೆಚ್ಚು ಪ್ರಕರಣಗಳಿಗೆ ಸಿಗಲಿದೆ ಪರಿಹಾರ

ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ಅಧಿಕೃತ ಹೇಳಿಕೆಯ ಪ್ರಕಾರ, ಈ 5.5 ಬಿಲಿಯನ್ ಡಾಲರ್ ರಾಜಿಯು ನ್ಯೂಜೆರ್ಸಿಯ ಫೆಡರಲ್ ನ್ಯಾಯಾಲಯದಲ್ಲಿ ಕ್ರೋಢೀಕರಿಸಲ್ಪಟ್ಟಿರುವ ಹಾಗೂ ವಿವಿಧ ರಾಜ್ಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಸುಮಾರು 69,000 ಪ್ರಕರಣಗಳನ್ನು ಒಳಗೊಳ್ಳಲಿದೆ.

ಈ ಒಪ್ಪಂದ ಜಾರಿಗೆ ಬಂದಲ್ಲಿ, ಪ್ರಸ್ತುತ ಕಂಪನಿಯ ವಿರುದ್ಧ ಚಾಲ್ತಿಯಲ್ಲಿರುವ ಒಟ್ಟು ಟಾಲ್ಕ್ ಸಂಬಂಧಿತ ದೂರುಗಳ ಪೈಕಿ ಶೇಕಡಾ 99.75% ನಷ್ಟು ಪ್ರಕರಣಗಳು ಇತ್ಯರ್ಥಗೊಳ್ಳಲಿವೆ.

ಸಂತ್ರಸ್ತರ ಪರವಾಗಿ ವಾದ ಮಂಡಿಸುತ್ತಿದ್ದ ಪ್ರಮುಖ ವಕೀಲರು ಮತ್ತು ಕಾನೂನು ಸಂಸ್ಥೆಗಳು ಸಹ ಸೋಮವಾರ ಈ ಒಪ್ಪಂದವನ್ನು ದೃಢಪಡಿಸಿವೆ. ಸುಮಾರು ಹತ್ತು ವರ್ಷಗಳ ಸುದೀರ್ಘ ಹಾಗೂ ಕಠಿಣ ನ್ಯಾಯಾಲಯದ ಹೋರಾಟದ ನಂತರ ಇದು ಸಂತ್ರಸ್ತರಿಗೆ ಸಿಕ್ಕ ಸೂಕ್ತ ಹಾಗೂ ನ್ಯಾಯಯುತ ಪರಿಹಾರ ಎಂದು ಅರ್ಜಿದಾರರ ಪರ ವಕೀಲರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಈ ಒಪ್ಪಂದವು ಅಂತಿಮವಾಗಿ ಜಾರಿಗೆ ಬರಲು ಫೆಡರಲ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಅಧಿಕೃತ ಅನುಮೋದನೆ ಮತ್ತು ಶೇಕಡಾ 95 ರಷ್ಟು ದೂರುದಾರರ ಸಮ್ಮತಿ ಅಗತ್ಯವಾಗಿದೆ.

"ಆರೋಪಗಳು ನಿರಾಧಾರ"

ಒಂದೆಡೆ ಬಿಲಿಯನ್‌ಗಟ್ಟಲೆ ಡಾಲರ್ ಪರಿಹಾರ ನೀಡಲು ಒಪ್ಪಿಕೊಂಡಿದ್ದರೂ, ತನ್ನ ಉತ್ಪನ್ನಗಳಲ್ಲಿ ಯಾವುದೇ ಲೋಪವಿಲ್ಲ ಎಂಬ ತನ್ನ ಹಳೆಯ ವಾದಕ್ಕೆ ಕಂಪನಿ ಬದ್ಧವಾಗಿದೆ. ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ದಾವೆ ವಿಭಾಗದ ಉಪಾಧ್ಯಕ್ಷ (Vice President of Litigation) ಇರಿಕ್ ಹಾಸ್ (Erik Haas) ಅವರು ಮಾತನಾಡಿ, "ಗ್ರಾಹಕರು ಮತ್ತು ಸಂತ್ರಸ್ತರು ಮಾಡಿರುವ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ" ಎಂದು ಪುನರುಚ್ಚರಿಸಿದ್ದಾರೆ.

"ಕಾನೂನು ಸಮರವನ್ನು ಮುಂದುವರಿಸಿದ್ದರೆ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯೇ ಅಂತಿಮವಾಗಿ ಜಯಗಳಿಸುತ್ತಿತ್ತು ಎಂಬ ಸಂಪೂರ್ಣ ನಂಬಿಕೆ ನಮಗಿದೆ. ಇಷ್ಟು ದಿನ ನಡೆದ ಬಹುತೇಕ ವಿಚಾರಣೆಗಳಲ್ಲಿ ಕಂಪನಿಯ ಪರವಾಗಿಯೇ ತೀರ್ಪುಗಳು ಬಂದಿವೆ. ಆದರೆ, ಈ ವ್ಯಾಜ್ಯವನ್ನು ಇಲ್ಲಿಗೆ ಮುಕ್ತಾಯಗೊಳಿಸುವುದರಿಂದ ಕಂಪನಿಯು ಕಾನೂನು ತೊಂದರೆಗಳಿಂದ ಹೊರಬಂದು, ಜೀವ ಉಳಿಸುವ ಹೊಸ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಅಭಿವೃದ್ಧಿಪಡಿಸುವ ತನ್ನ ಮೂಲ ಉದ್ದೇಶದತ್ತ ಗಮನ ಹರಿಸಲು ಸಾಧ್ಯವಾಗುತ್ತದೆ" ಎಂದು ಹಾಸ್ ತಿಳಿಸಿದ್ದಾರೆ.

ಕಾನೂನು ಸಮರದ ರೋಚಕ ಹಿನ್ನೆಲೆ

ಟಾಲ್ಕಮ್ ಪೌಡರ್ ಮತ್ತು ಕ್ಯಾನ್ಸರ್ ನಡುವಿನ ಲಿಂಕ್‌ಗೆ ಸಂಬಂಧಿಸಿದಂತೆ ಜಾನ್ಸನ್ ಅಂಡ್ ಜಾನ್ಸನ್ ವಿರುದ್ಧ ಕಳೆದ ಒಂದು ದಶಕದಿಂದ ಅಮೆರಿಕದಾದ್ಯಂತ ಸಾವಿರಾರು ಮಹಿಳೆಯರು ದೂರು ದಾಖಲಿಸುತ್ತಲೇ ಬಂದಿದ್ದರು.

ಆಸಿಸ್ಬೆಸ್ಟಾಸ್ ಮಾಲಿನ್ಯದ ಆರೋಪ: ಟಾಲ್ಕ್ ಎಂಬುದು ಭೂಮಿಯಿಂದ ತೆಗೆಯಲ್ಪಡುವ ಒಂದು ಮೃದುವಾದ ಖನಿಜ. ಇದನ್ನು ಗಣಿಗಾರಿಕೆ ಮಾಡುವಾಗ ಅದರ ಜೊತೆಗೆ ಕ್ಯಾನ್ಸರ್‌ಗೆ ಕಾರಣವಾಗುವ 'ಆಸ್ಬೆಸ್ಟಾಸ್' (Asbestos) ಎಂಬ ಅಪಾಯಕಾರಿ ಖನಿಜವೂ ಸೇರಿಕೊಳ್ಳುತ್ತದೆ ಎಂಬುದು ಅರ್ಜಿದಾರರ ಮುಖ್ಯ ಆರೋಪವಾಗಿತ್ತು.

ಅಂಡಾಶಯದ ಕ್ಯಾನ್ಸರ್: ಮಹಿಳೆಯರು ಈ ಪೌಡರ್ ಅನ್ನು ನಿರಂತರವಾಗಿ ಬಳಸುವುದರಿಂದ ಆಸ್ಬೆಸ್ಟಾಸ್ ಕಣಗಳು ದೇಹವನ್ನು ಸೇರಿ ಅಂಡಾಶಯದ ಉರಿಯೂತ ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದು ಆರೋಪಿಸಲಾಗಿತ್ತು

ವಿಪರೀತ ದಂಡಗಳು: ಹಲವು ಪ್ರಕರಣಗಳಲ್ಲಿ ಅಮೆರಿಕದ ಜ್ಯೂರಿಗಳು ಸಂತ್ರಸ್ತರ ಪರವಾಗಿ ತೀರ್ಪು ನೀಡಿ, ಜಾನ್ಸನ್ ಅಂಡ್ ಜಾನ್ಸನ್‌ಗೆ ಕೋಟ್ಯಂತರ ಡಾಲರ್ ದಂಡ ವಿಧಿಸಿದ್ದ ಉದಾಹರಣೆಗಳೂ ಇವೆ.

ಕಂಪನಿಯು ತನ್ನ ಟಾಲ್ಕ್ ಆಧಾರಿತ ಪೌಡರ್‌ಗಳು ಸಂಪೂರ್ಣ ಸುರಕ್ಷಿತ ಮತ್ತು ಆಸ್ಬೆಸ್ಟಾಸ್ ಮುಕ್ತ ಎಂದು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿತ್ತಾದರೂ, ಹೆಚ್ಚುತ್ತಿದ್ದ ಕಾನೂನು ಒತ್ತಡ ಹಾಗೂ ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ 2020 ರಲ್ಲಿ ಉತ್ತರ ಅಮೆರಿಕದಲ್ಲಿ (ಅಮೆರಿಕ ಮತ್ತು ಕೆನಡಾ) ಟಾಲ್ಕ್ ಆಧಾರಿತ ಬೇಬಿ ಪೌಡರ್ ಮಾರಾಟವನ್ನು ಸ್ಥಗಿತಗೊಳಿಸಿತು. ನಂತರದ ದಿನಗಳಲ್ಲಿ ಅದಕ್ಕೆ ಪರ್ಯಾಯವಾಗಿ ಜೋಳದ ಹಿಟ್ಟಿನ (Cornstarch) ಆಧಾರಿತ ಪೌಡರ್ ಅನ್ನು ಮಾರುಕಟ್ಟೆಗೆ ತಂದಿತು. 2023 ರ ವೇಳೆಗೆ ಜಾಗತಿಕವಾಗಿಯೂ ಟಾಲ್ಕ್ ಪೌಡರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿತು.

ಬ್ಯಾಂಕ್ರಪ್ಸಿ ತಂತ್ರದಿಂದ ಪ್ರಸ್ತುತ ರಾಜಿಯವರೆಗೆ

ಈ ಬೃಹತ್ ದಾವೆಗಳಿಂದ ಪಾರಾಗಲು ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯು ಈ ಹಿಂದೆ ಹಲವು ತಂತ್ರಗಳನ್ನು ಬಳಸಿತ್ತು. ಕಂಪನಿಯು ತನ್ನ ಟಾಲ್ಕ್ ಹೊಣೆಗಾರಿಕೆಗಳನ್ನು 'ಎಲ್ಎಎಲ್ಸಿ' (LTL Management) ಎಂಬ ಪ್ರತ್ಯೇಕ ಅಂಗಸಂಸ್ಥೆಗೆ ವರ್ಗಾಯಿಸಿ, ಆ ಸಂಸ್ಥೆಯ ಮೂಲಕ 'ದಿವಾಳಿ' (Bankruptcy) ಅರ್ಜಿಯನ್ನು ಸಲ್ಲಿಸಲು ಯತ್ನಿಸಿತ್ತು. ಈ ಮೂಲಕ ಎಲ್ಲಾ ದಾವೆಗಳನ್ನು ಒಂದೇ ಕಡೆ ಇತ್ಯರ್ಥಪಡಿಸಿಕೊಳ್ಳುವುದು ಕಂಪನಿಯ ಉದ್ದೇಶವಾಗಿತ್ತು.

ಆದರೆ, ಅಮೆರಿಕದ ಬ್ಯಾಂಕ್ರಪ್ಸಿ ನ್ಯಾಯಾಲಯಗಳು ಕಂಪನಿಯ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಅರ್ಜಿಯನ್ನು ತಿರಸ್ಕರಿಸಿದವು. ಸುಮಾರು ಮೂರು ವರ್ಷಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದ ವಿಚಾರಣೆಯು 2025 ರ ಮಾರ್ಚ್‌ನಲ್ಲಿ ಮರುಆರಂಭಗೊಂಡಿತು.

ಇದರ ಮಧ್ಯೆ, ಇತ್ತೀಚೆಗೆ ಜಾನ್ಸನ್ ಅಂಡ್ ಜಾನ್ಸನ್‌ಗೆ ನ್ಯಾಯಾಲಯದಲ್ಲಿ ದೊಡ್ಡ ಜಯವೊಂದ ಸಿಕ್ಕಿತ್ತು. ಅರ್ಜಿದಾರರು ಬಳಸಿದ ಟಾಲ್ಕ್ ಪೌಡರ್‌ನಿಂದಲೇ ಅವರಿಗೆ ನಿರ್ದಿಷ್ಟವಾಗಿ ಅಂಡಾಶಯದ ಕ್ಯಾನ್ಸರ್ ಬಂದಿದೆ ಎಂದು ಸಾಬೀತುಪಡಿಸಲು ಸೂಕ್ತ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ಎಂದು ಫೆಡರಲ್ ನ್ಯಾಯಾಧೀಶರೊಬ್ಬರು ಸಂಶಯ ವ್ಯಕ್ತಪಡಿಸಿದ್ದರು. ಈ ತೀರ್ಪು ಕಂಪನಿಗೆ ಬಲ ನೀಡಿತಾದರೂ, ದೀರ್ಘಕಾಲದ ಕಾನೂನು ಪ್ರಕ್ರಿಯೆಗೆ ತಗಲುವ ವೆಚ್ಚ ಮತ್ತು ಕಂಪನಿಯ ಬ್ರ್ಯಾಂಡ್ ಮೌಲ್ಯಕ್ಕೆ ಆಗುವ ಧಕ್ಕೆಯನ್ನು ತಪ್ಪಿಸಲು 5.5 ಬಿಲಿಯನ್ ಡಾಲರ್ ನೀಡಿ ರಾಜಿಗೆ ಬರಲು ನಿರ್ಧರಿಸಿದೆ.

Johnson & Johnson

Comments

Sign in to comment
Please to leave a comment on this article.
Subscribe to Our Newsletter

Get the latest articles delivered to your inbox.

Popular News

Related Articles

Leopard Attacks Forest Officer During Rescue in Karnataka!
Leopard Attacks Forest Officer During Rescue in Karnataka!