ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಜೆಫರೀಸ್ (Jefferies), ಭಾರತದ ಪ್ರಮುಖ ಫುಡ್ ಡೆಲಿವರಿ ಹಾಗೂ ಕ್ವಿಕ್ ಕಾಮರ್ಸ್ ದೈತ್ಯ ಸಂಸ್ಥೆಗಳಾದ 'ಎಟರ್ನಲ್' (ಝೊಮ್ಯಾಟೋ ಮತ್ತು ಬ್ಲಿಂಕಿಟ್‌ನ ಮಾತೃ ಸಂಸ್ಥೆ) ಹಾಗೂ 'ಸ್ವಗ್ಗಿ' (Swiggy) ನಡುವೆ ತೌಲನಿಕ ವಿಶ್ಲೇಷಣೆ ನಡೆಸಿದೆ.

ವ್ಯವಹಾರದ ಗಾತ್ರ, ಲಾಭದಾಯಕತೆ ಹಾಗೂ ದಕ್ಷ ಕಾರ್ಯಾಚರಣೆಯ ವಿಷಯದಲ್ಲಿ ಎಟರ್ನಲ್ ಸಂಸ್ಥೆಯು ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದ್ದರೂ ಸಹ, ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರುವ ಹೂಡಿಕೆದಾರರಿಗೆ ಸ್ವಗ್ಗಿ ಷೇರುಗಳು ಭವಿಷ್ಯದಲ್ಲಿ ಹೆಚ್ಚಿನ ಶೇಕಡಾವಾರು ಲಾಭ (Upside) ನೀಡಬಹುದು ಎಂದು ಜೆಫರೀಸ್ ಅಭಿಪ್ರಾಯಪಟ್ಟಿದೆ.
ಕಳೆದ ಒಂಬತ್ತು ತ್ರೈಮಾಸಿಕಗಳಲ್ಲಿ ಎಟರ್ನಲ್ ಕಂಪನಿಯು ತನ್ನ ಸುಧಾರಿತ ಉದ್ಯಮ ಮಾದರಿ, ಗಟ್ಟಿಯಾದ ಯೂನಿಟ್ ಎಕನಾಮಿಕ್ಸ್ ಹಾಗೂ ವಿಶಾಲವಾದ ಕಾರ್ಯಾಚರಣಾ ಜಾಲದ ಮೂಲಕ ಮಾರುಕಟ್ಟೆಯಲ್ಲಿ ತನ್ನ ನಾಯಕತ್ವದ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ ಎಂದು ಜೆಫರೀಸ್ ತಿಳಿಸಿದೆ. ಫುಡ್ ಡೆಲಿವರಿ ಹಾಗೂ ತಕ್ಷಣದ ವಿತರಣೆ (Quick Commerce) ವಲಯಗಳಲ್ಲಿ ಎಟರ್ನಲ್ ಇಂದಿಗೂ ತನ್ನ ಆಧಿಪತ್ಯವನ್ನು ಮುಂದುವರಿಸಿದೆ.
ಎಟರ್ನಲ್ ಸಂಸ್ಥೆಯ ಕ್ವಿಕ್ ಕಾಮರ್ಸ್ ವೇದಿಕೆಯಾದ ಬ್ಲಿಂಕಿಟ್ (Blinkit), ಸ್ವಗ್ಗಿಯ ಇನ್‌ಸ್ಟಾಮಾರ್ಟ್‌ಗೆ (Instamart) ಹೋಲಿಸಿದರೆ ಪ್ರಮುಖ ಸೂಚ್ಯಂಕಗಳಲ್ಲಿ ಭಾರಿ ಮುನ್ನಡೆಯಲ್ಲಿದೆ. ಒಟ್ಟು ಆರ್ಡರ್ ಮೌಲ್ಯ (GOV), ಡಾರ್ಕ್ ಸ್ಟೋರ್‌ಗಳ ಸಂಖ್ಯೆ, ಮಾಸಿಕ ಸಕ್ರಿಯ ಗ್ರಾಹಕರು, ಆರ್ಡರ್‌ಗಳ ಪ್ರಮಾಣ ಹಾಗೂ ಒಟ್ಟಾರೆ ಲಾಭದಾಯಕತೆಯಲ್ಲಿ ಬ್ಲಿಂಕಿಟ್ ಪ್ರಥಮ ಸ್ಥಾನದಲ್ಲಿದೆ. ಕ್ವಿಕ್ ಕಾಮರ್ಸ್ ವಲಯದ ಶೇಕಡಾ 74 ರಷ್ಟು ಜಿಒವಿ ಬ್ಲಿಂಕಿಟ್ ಪಾಲಾಗಿದ್ದರೆ, ಇನ್‌ಸ್ಟಾಮಾರ್ಟ್ ಕೇವಲ ಶೇಕಡಾ 26 ರಷ್ಟು ಪಾಲು ಹೊಂದಿದೆ. ಅಲ್ಲದೆ, ದೇಶದ ಒಟ್ಟು ಡಾರ್ಕ್ ಸ್ಟೋರ್‌ಗಳ ಪೈಕಿ ಶೇ. 68 ರಷ್ಟನ್ನು ಬ್ಲಿಂಕಿಟ್ ಹೊಂದಿದ್ದರೆ, ಇನ್‌ಸ್ಟಾಮಾರ್ಟ್ ಶೇ. 32 ರಷ್ಟನ್ನು ಹೊಂದಿದೆ.
ಮಾರುಕಟ್ಟೆಯ ಶೇರು ಪಾಲಿನಲ್ಲಿ ಕೊಂಚ ಹಿನ್ನಡೆ ಅನುಭವಿಸಿದ್ದರೂ, ಸ್ವಗ್ಗಿ ಕಂಪನಿಯು ಲಾಭದಾಯಕತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಜೆಫರೀಸ್ ಪ್ರಶಂಸಿಸಿದೆ. ಕಳೆದ ಒಂದು ವರ್ಷದಲ್ಲಿ ಸ್ವಗ್ಗಿಯ ಫುಡ್ ಡೆಲಿವರಿ ವಿಭಾಗದ ಇಬಿಐಟಿಡಿಎ (EBITDA) ಗಳಿಕೆಯು ಬರೋಬ್ಬರಿ ಐದು ಪಟ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಎಟರ್ನಲ್‌ನ ಇಬಿಐಟಿಡಿಎ ಎರಡು ಪಟ್ಟು ಮಾತ್ರ ಬೆಳೆದಿದೆ. ಈ ಮೂಲಕ ಸ್ವಗ್ಗಿಯು ಎಟರ್ನಲ್ ಜೊತೆಗಿನ ಲಾಭದ ಅಂತರವನ್ನು ವೇಗವಾಗಿ ಕಡಿಮೆ ಮಾಡುತ್ತಿದ್ದು, ಉದ್ಯಮದ ವಿಸ್ತರಣೆಗೂ ಗಮನ ನೀಡುತ್ತಿದೆ. ಇನ್‌ಸ್ಟಾಮಾರ್ಟ್ ವಿಭಾಗವು 'ಕಾಂಟ್ರಿಬ್ಯೂಷನ್ ಮಾರ್ಜಿನ್ ಬ್ರೇಕ್-ಈವನ್' ಹಂತ ತಲುಪಿರುವುದು ಸ್ವಗ್ಗಿಯ ದಕ್ಷತೆಗೆ ಸಿಕ್ಕ ದೊಡ್ಡ ಗೆಲುವಾಗಿದೆ.
ಜೆಫರೀಸ್ ವಿಶ್ಲೇಷಣೆಯ ಪ್ರಕಾರ, ಸ್ವಗ್ಗಿ ಸಂಸ್ಥೆಯು ಕ್ವಿಕ್ ಕಾಮರ್ಸ್‌ನಲ್ಲೂ ತನ್ನ ಸುಧಾರಿತ ಲಾಭದಾಯಕತೆಯನ್ನು ಕಾಯ್ದುಕೊಂಡು, ಶಿಸ್ತುಬದ್ಧವಾಗಿ ಬೆಳೆದರೆ ಹೂಡಿಕೆದಾರರಿಗೆ ಇದು 'ಹೈ ರಿಸ್ಕ್ - ಹೈ ರಿವಾರ್ಡ್' (ಹೆಚ್ಚಿನ ಆತಂಕ - ಹೆಚ್ಚಿನ ಲಾಭ) ನೀಡಬಲ್ಲ ಅವಕಾಶವಾಗಲಿದೆ. ಮಾರುಕಟ್ಟೆಯ ಗಾತ್ರದಲ್ಲಿ ಎಟರ್ನಲ್‌ಗಿಂತ ಹಿಂದಿದ್ದರೂ, ಕಾರ್ಯಾಚರಣೆಯ ದಕ್ಷತೆಯಲ್ಲಿ ನಿರಂತರ ಸುಧಾರಣೆ ಕಂಡುಬಂದರೆ ಮುಂದಿನ ದಿನಗಳಲ್ಲಿ ಉಭಯ ಕಂಪನಿಗಳ ಮೌಲ್ಯಮಾಪನದಲ್ಲಿರುವ (Valuation Gap) ಅಂತರ ಕಡಿಮೆಯಾಗಲಿದೆ.
ಆದಾಗ್ಯೂ, ಭಾರತದ ಇಂಟರ್ನೆಟ್ ಹಾಗೂ ಗ್ರಾಹಕ ತಂತ್ರಜ್ಞಾನ ವಲಯದಲ್ಲಿ ಎಟರ್ನಲ್ ಕಂಪನಿಯನ್ನೇ ತಮ್ಮ ಮೊದಲ ಆಯ್ಕೆಯನ್ನಾಗಿ (Top Pick) ಜೆಫರೀಸ್ ಶಿಫಾರಸು ಮಾಡಿದೆ. ಮಾರುಕಟ್ಟೆಯ ಮೇಲುಗೈ, ಉತ್ತಮ ಯೂನಿಟ್ ಎಕನಾಮಿಕ್ಸ್, ಗಟ್ಟಿಯಾದ ಲಾಭದಾಯಕತೆ ಹಾಗೂ ಬೃಹತ್ ಕಾರ್ಯಾಚರಣೆಯ ಬಲದಿಂದಾಗಿ ಎಟರ್ನಲ್ ಪ್ರತಿಯೊಬ್ಬ ಹೂಡಿಕೆದಾರರ ಪೋರ್ಟ್‌ಫೋಲಿಯೋದಲ್ಲೂ ಇರಲೇಬೇಕಾದ (Must-own) ಷೇರು ಎಂದು ಹೇಳಿದೆ. ಈ ಎಲ್ಲಾ ಬಲವಾದ ಅಂಶಗಳು ಎಟರ್ನಲ್ ಕಂಪನಿಯ ಹೆಚ್ಚಿನ ಮೌಲ್ಯಮಾಪನವನ್ನು ಸಮರ್ಥಿಸುತ್ತವೆ ಎಂದು ಬ್ರೋಕರೇಜ್ ಸ್ಪಷ್ಟಪಡಿಸಿದೆ.
ಎರಡೂ ಕಂಪನಿಗಳ ನಡುವೆ ಪೈಪೋಟಿ ತೀವ್ರಗೊಳ್ಳುತ್ತಿರುವುದು ಮಾರುಕಟ್ಟೆಯನ್ನು ಇನ್ನಷ್ಟು ಕುತೂಹಲಕಾರಿಯನ್ನಾಗಿ ಮಾಡಿದೆ. ಹೊಸ ಪ್ರಯೋಗಗಳು ಹಾಗೂ ನಾವೀನ್ಯತೆಗಳಲ್ಲಿ ಸ್ವಗ್ಗಿ ಹೆಚ್ಚು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇನ್‌ಸ್ಟಾಮಾರ್ಟ್ ಅನ್ನು ದಕ್ಷವಾಗಿ ಬೆಳೆಸಿದರೆ ಎಟರ್ನಲ್ ಜೊತೆಗಿನ ಅಂತರವನ್ನು ಕಡಿಮೆ ಮಾಡಬಹುದು.
ಹೂಡಿಕೆದಾರರ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಷೇರು ಆಯ್ಕೆ ಆಧಾರಿತವಾಗಿದೆ: ಸ್ಥಿರತೆ, ಮಾರುಕಟ್ಟೆ ನಾಯಕತ್ವ ಮತ್ತು ಸಾಬೀತಾದ ಯಶಸ್ಸನ್ನು ಬಯಸುವವರು 'ಎಟರ್ನಲ್' ಆಯ್ಕೆ ಮಾಡಬಹುದು; ಹಾಗೆಯೇ, ಹೆಚ್ಚಿನ ರಿಸ್ಕ್ ತೆಗೆದುಕೊಂಡು ದೀರ್ಘಕಾಲದಲ್ಲಿ ದೊಡ್ಡ ಮಟ್ಟದ ಲಾಭ ನಿರೀಕ್ಷಿಸುವವರು 'ಸ್ವಗ್ಗಿ' ಷೇರುಗಳನ್ನು ಪರಿಗಣಿಸಬಹುದು.
Comments
Please to leave a comment on this article.