ಭಾರತದ ಪ್ರಮುಖ ಸಿಮೆಂಟ್ ಉತ್ಪಾದನಾ ಕಂಪನಿಗಳಲ್ಲಿ ಒಂದಾದ ಅಂಬುಜಾ ಸಿಮೆಂಟ್ಸ್ ಲಿಮಿಟೆಡ್ (Ambuja Cements Ltd.), 2027ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1 FY27) ಅತ್ಯುತ್ತಮ ಹಣಕಾಸು ಸಾಧನೆ ತೋರುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಬಲವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ವೆಚ್ಚ ನಿರ್ವಹಣೆ ಮತ್ತು ಕಾರ್ಯಾಚರಣೆಯ ದಕ್ಷತೆಯ ಬಲದಿಂದ ಕಂಪನಿಯು ಈ ಅವಧಿಯಲ್ಲಿ ಭರ್ಜರಿ ಆದಾಯ ಹಾಗೂ ಲಾಭದ ಬೆಳವಣಿಗೆಯನ್ನು ದಾಖಲಿಸಿದೆ.

ಜೂನ್ 30, 2026ಕ್ಕೆ ಕೊನೆಗೊಂಡ ಈ ತ್ರೈಮಾಸಿಕದಲ್ಲಿ ಕಂಪನಿಯು ಬೃಹತ್ ಮಟ್ಟದ ಒಟ್ಟು 9,500 ಕೋಟಿ ರೂಪಾಯಿ ಆದಾಯವನ್ನು ಗಳಿಸಿದ್ದು, ಹೂಡಿಕೆದಾರರ ವಲಯದಲ್ಲಿ ಸಕಾರಾತ್ಮಕ ಸಂಚಲನ ಮೂಡಿಸಿದೆ. ಕಂಪನಿಯ ಹಣಕಾಸು ವರದಿಯ ಪ್ರಕಾರ, ಪ್ರಥಮ ತ್ರೈಮಾಸಿಕದಲ್ಲಿ ಅಂಬುಜಾ ಸಿಮೆಂಟ್ಸ್‌ನ ಕಾರ್ಯಚರಣೆಯ ಎಬಿಟಿಡಿಎ (Operating EBITDA) 1,589 ಕೋಟಿ ರೂಪಾಯಿಗೆ ತಲುಪಿದೆ. ಇದರೊಂದಿಗೆ ಎಬಿಟಿಡಿಎ ಮಾರ್ಜಿನ್ ಶೇಕಡಾ 16.7ರಷ್ಟಿದ್ದು, ಕೇವಲ ಒಂದು ಕಾಲುಭಾಗದ ಅವಧಿಯಲ್ಲಿ (Quarter-on-Quarter) ಇದು ಶೇಕಡಾ 3.3ರಷ್ಟು (331 ಬೇಸಿಸ್ ಪಾಯಿಂಟ್‌ಗಳು) ಏರಿಕೆ ಕಂಡಿದೆ.
ಪಶ್ಚಿಮ ಏಷ್ಯಾದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆಯೂ ಪ್ರೀಮಿಯಂ ಸಿಮೆಂಟ್ ಉತ್ಪನ್ನಗಳ ಮಾರಾಟದಲ್ಲಿ ಹೆಚ್ಚಳ, ವಿಸ್ತೃತ ಮಾರಾಟ ಜಾಲ, ಉತ್ಪಾದನಾ ದಕ್ಷತೆ ಹಾಗೂ ನವೀಕರಿಸಬಹುದಾದ ಇಂಧನದಲ್ಲಿನ ನಿರಂತರ ಹೂಡಿಕೆಯು ಈ ಉತ್ತಮ ಫಲಿತಾಂಶಕ್ಕೆ ಮುಖ್ಯ ಕಾರಣವಾಗಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಸಿಮೆಂಟ್ ಉತ್ಪನ್ನಗಳಿಗೆ ಇದ್ದ ಬೇಡಿಕೆಯು ಆದಾಯ ಹೆಚ್ಚಳಕ್ಕೆ ನೆರವಾಗಿದೆ. ಇದರ ಜೊತೆಗೆ ಪ್ರೀಮಿಯಂ ಉತ್ಪನ್ನಗಳ ಬಂಡವಾಳವನ್ನು ಕಂಪನಿಯು ಮತ್ತಷ್ಟು ವಿಸ್ತರಿಸಿದೆ. ಪ್ರೀಮಿಯಂ ಉತ್ಪನ್ನಗಳ ಒಟ್ಟು ಪಾಲು ವಾರ್ಷಿಕ ಆಧಾರದ ಮೇಲೆ ಶೇಕಡಾ 1ರಷ್ಟು ಹೆಚ್ಚಾಗಿ ಶೇಕಡಾ 34ಕ್ಕೆ ಮುಟ್ಟಿದೆ.
ಇದು ಉನ್ನತ ದರ್ಜೆಯ ಸಿಮೆಂಟ್‌ಗಳ ಕಡೆಗೆ ಗ್ರಾಹಕರ ಒಲವು ಹೆಚ್ಚುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ. ಕಂಪನಿಯ ಮಾರುಕಟ್ಟೆ ಕಾರ್ಯತಂತ್ರದ ಭಾಗವಾಗಿ ಟ್ರೇಡ್ ಮಾರಾಟವು ಶೇಕಡಾ 4ರಷ್ಟು ಏರಿಕೆಯಾಗಿ ಶೇಕಡಾ 78ಕ್ಕೆ ತಲುಪಿದೆ. ಈ ಎಲ್ಲಾ ಸುಧಾರಣೆಗಳು ಕಂಪನಿಯ ಕಾರ್ಯಾಚರಣೆಯ ಗುಣಮಟ್ಟವನ್ನು ಮತ್ತಷ್ಟು ಎತ್ತಿಹಿಡಿದಿವೆ. ಜಾಗತಿಕ ಸವಾಲುಗಳು ಮತ್ತು ಇಂಧನ ಮಾರುಕಟ್ಟೆಯ ಒತ್ತಡದ ಮಧ್ಯೆಯೂ ಕಾರ್ಯಾಚರಣಾ ವೆಚ್ಚವನ್ನು ತಗ್ಗಿಸುವಲ್ಲಿ ಕಂಪನಿ ಯಶಸ್ವಿಯಾಗಿರುವುದು ಈ ತ್ರೈಮಾಸಿಕದ ದೊಡ್ಡ ವಿಶೇಷತೆಯಾಗಿದೆ.Focused cost optimization ಕ್ರಮಗಳು ಹಾಗೂ ಇಂಧನ ದಕ್ಷತೆಯಿಂದಾಗಿ ಕಂಪನಿಯು ಪ್ರತಿ ಮೆಟ್ರಿಕ್ ಟನ್‌ಗೆ (PMT) ಬರೋಬ್ಬರಿ 206 ರೂಪಾಯಿಗಳಷ್ಟು ವೆಚ್ಚ ಕಡಿತ ಸಾಧಿಸಿದೆ.
ಎಫ್‌ವೈ27ರ ಕೊನೆಯ ವೇಳೆಗೆ ಪ್ರತಿ ಮೆಟ್ರಿಕ್ ಟನ್‌ಗೆ ಸುಮಾರು 4,250 ರೂಪಾಯಿಗಳ ಕಾರ್ಯಾಚರಣಾ ವೆಚ್ಚದ ಗುರಿಯನ್ನು ತಲುಪಲು ಕಂಪನಿ ಸಜ್ಜಾಗುತ್ತಿದ್ದು, ಇದರಿಂದ ಹೆಚ್ಚುವರಿಯಾಗಿ ಪ್ರತಿ ಟನ್ ಮೇಲೆ 250 ರೂಪಾಯಿ ಉಳಿತಾಯವಾಗಲಿದೆ ಎಂದು ಮ್ಯಾನೇಜ್‌ಮೆಂಟ್ ತಿಳಿಸಿದೆ. ಸುಸ್ಥಿರ ಅಭಿವೃದ್ಧಿಯ ಗುರಿಯೊಂದಿಗೆ ಕಂಪನಿಯು ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು 75 ಮೆಗಾವ್ಯಾಟ್‌ನಷ್ಟು ಹೆಚ್ಚಿಸಿಕೊಂಡಿದ್ದು, ಒಟ್ಟು ಹಸಿರು ಇಂಧನ ಸಾಮರ್ಥ್ಯವು 973 ಮೆಗಾವ್ಯಾಟ್‌ಗೆ ತಲುಪಿದೆ.
ಇದರೊಂದಿಗೆ ಗ್ರೀನ್ ಪವರ್ ಕೊಡುಗೆಯು ಶೇಕಡಾ 34ಕ್ಕೆ ಏರಿಕೆಯಾಗಿದೆ. ಇನ್ನು ವಿಶೇಷವೆಂದರೆ, ಅಂಬುಜಾ ಸಿಮೆಂಟ್ಸ್ ಸಂಪೂರ್ಣ ಸಾಲಮುಕ್ತ (Debt-free) ಬ್ಯಾಲೆನ್ಸ್ ಶೀಟ್ ಹೊಂದಿದ್ದು, ಅತ್ಯುತ್ತಮ ಕ್ರೆಡಿಟ್ ರೇಟಿಂಗ್‌ನೊಂದಿಗೆ ಭವಿಷ್ಯದ ಹೂಡಿಕೆಗಳಿಗೆ ಬಲವಾದ ಆರ್ಥಿಕ ಸ್ವಾತಂತ್ರ್ಯವನ್ನು ಕಾಯ್ದುಕೊಂಡಿದೆ.
ಪ್ರಸಕ್ತ ಹಣಕಾಸು ವರ್ಷದ ಆರಂಭದ ಕುರಿತು ಮಾತನಾಡಿದ ಕಂಪನಿಯ ಪೂರ್ಣಕಾಲಿಕ ನಿರ್ದೇಶಕ ಮತ್ತು ಸಿಇಒ ವಿನೋದ್ ಬಹೇತಿ, ಮೌಲ್ಯಯುತ ಬೆಳವಣಿಗೆ, ಪ್ರೀಮಿಯರೀಕರಣ ಮತ್ತು ಕಟ್ಟುನಿಟ್ಟಿನ ನಿರ್ವಹಣೆಯೊಂದಿಗೆ ಕಂಪನಿಯು ಎಫ್‌ವೈ27ಕ್ಕೆ ಅತ್ಯುತ್ತಮ ಚಾಲನೆ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಹೆಚ್ಚಿದ ಟ್ರೇಡ್ ಮಾರಾಟ ಮತ್ತು ಪರಿಣಾಮಕಾರಿ ವೆಚ್ಚ ನಿಯಂತ್ರಣವು ಜಾಗತಿಕ ಸವಾಲುಗಳನ್ನು ಎದುರಿಸಿ ಲಾಭ ಗಳಿಸಲು ನೆರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೌಲ್ಯಯುತ ವಿಸ್ತರಣಾ ಕಾರ್ಯತಂತ್ರದ ಭಾಗವಾಗಿ ಅಂಬುಜಾ ಸಿಮೆಂಟ್ಸ್ ತನ್ನ ಒಟ್ಟು ಉತ್ಪಾದನಾ ಸಾಮರ್ಥ್ಯವನ್ನು ಎಫ್‌ವೈ27ರ ಅಂತ್ಯದ ವೇಳೆಗೆ 119 ಮಿಲಿಯನ್ ಟನ್‌ಗಳಿಗೆ (MTPA) ತಲುಪಿಸುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ದಹೇಜ್ (1.2 MTPA), ಸಲೈ ಬನ್ವಾ (2.4 MTPA), ಬಟಿಂಡಾ (1.2 MTPA), ಜೋಧ್‌ಪುರ್ (2.0 MTPA), ಕಳಂಬೋಲಿ (1.0 MTPA) ಮತ್ತು ವಾರಿಸಲಿಗಂಜ್ (2.4 MTPA) ನಂತಹ ಹೊಸ ಘಟಕಗಳು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿವೆ. ಈ ಹೊಸ ಯೋಜನೆಗಳು ಭಾರತದಾದ್ಯಂತ ಹೆಚ್ಚುತ್ತಿರುವ ಮೂಲಭೂತ ಸೌಕರ್ಯ ಮತ್ತು ವಸತಿ ಕ್ಷೇತ್ರಗಳ ಬೇಡಿಕೆಯನ್ನು ಪೂರೈಸಲು ಸಹಾಯ ಮಾಡಲಿವೆ.
ಬಲವಾದ ಆದಾಯ, ಸುಧಾರಿತ ಮಾರ್ಜಿನ್‌ಗಳು, ಸಾಲಮುಕ್ತ ಆರ್ಥಿಕತೆ ಮತ್ತು ಮಹತ್ವಾಕಾಂಕ್ಷೆಯ ವಿಸ್ತರಣಾ ಯೋಜನೆಗಳೊಂದಿಗೆ ಅಂಬುಜಾ ಸಿಮೆಂಟ್ಸ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಗಮನಾರ್ಹ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದೆ. ಭಾರತದ ನಿರ್ಮಾಣ ಕ್ಷೇತ್ರ ಮತ್ತು ದೀರ್ಘಕಾಲೀನ ಮೂಲಭೂತ ಸೌಕರ್ಯಗಳ ಬೆಳವಣಿಗೆಯ ಲಾಭ ಪಡೆದುಕೊಳ್ಳಲು ಕಂಪನಿಯು ಸಂಪೂರ್ಣವಾಗಿ ಸಜ್ಜಾಗಿದ್ದು, ಸಿಮೆಂಟ್ ವಲಯದಲ್ಲಿ ಇದು ಮುಂಬರುವ ದಿನಗಳಲ್ಲಿ ಅತ್ಯಂತ ಆಕರ್ಷಕ ಕಂಪನಿಯಾಗಿ ಹೊರಹೊಮ್ಮಲಿದೆ.
Comments
Please to leave a comment on this article.