ದೇಶದಲ್ಲಿ ದಿನದಿಂದ ದಿನಕ್ಕೆ ಸೈಬರ್ ವಂಚಕರ ಜಾಲ ಹೆಚ್ಚಾಗುತ್ತಿದ್ದು, ಜನಸಾಮಾನ್ಯರ ಕಷ್ಟದ ಹಣವನ್ನು ಕೊಳ್ಳೆಹೊಡೆಯಲು ಹೊಸ ಹೊಸ ವಂಚನೆಯ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಅದರಲ್ಲೂ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ಕಾರ್ಪೊರೇಟ್ ಕಂಪನಿಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ಅಮಾಯಕರಿಗೆ ಕೋಟಿ ಕೋಟಿ ರೂ. ವಂಚನೆ ಮಾಡುತ್ತಿರುವ ಪ್ರಕರಣಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ.

ಸದ್ಯ ಅಂತಹದ್ದೇ ಒಂದು ಬೃಹತ್ ಸೈಬರ್ ವಂಚನೆ ಪ್ರಕರಣದಲ್ಲಿ, ಪ್ರತಿಷ್ಠಿತ ಟಾಟಾ ಗ್ರೂಪ್ ಕಂಪನಿಗಳ ಹೆಸರಿನಲ್ಲಿ ನಕಲಿ ಫ್ರಾಂಚೈಸಿ ನೀಡುವುದಾಗಿ ನಂಬಿಸಿ ಬರೋಬ್ಬರಿ 15.19 ಲಕ್ಷ ರೂಪಾಯಿಗಳನ್ನು ಟುಂಪಿ ಕೊಂಡಿದ್ದ ವ್ಯಕ್ತಿಯೊಬ್ಬನನ್ನು ಒಡಿಶಾ ರಾಜ್ಯದ ಭುವನೇಶ್ವರ ಸೈಬರ್ ಕ್ರೈಮ್ ಪೊಲೀಸರು ಬಿಹಾರದಲ್ಲಿ ಹೆಡೆಮುರಿ ಕಟ್ಟಿದ್ದಾರೆ.
ಬೆಚ್ಚಿಬೀಳಿಸುವ ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಆರೋಪಿಯನ್ನು ಬಿಹಾರದ ಸರಣ್ (Saran) ಜಿಲ್ಲೆಯ ನಿವಾಸಿ 50 ವರ್ಷ ವಯಸ್ಸಿನ ದಧಿಬಲ್ ಕುಮಾರ್ ಸಿಂಗ್ (Dadhibal Kumar Singh) ಎಂದು ಗುರುತಿಸಲಾಗಿದೆ. ಭುವನೇಶ್ವರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಕಳೆದ ಮಾರ್ಚ್ 26, 2026 ರಂದು ದಾಖಲಾದ ಅಪರಾಧ ಪ್ರಕರಣ ಸಂಖ್ಯೆ 43 ರ ಅಡಿಯಲ್ಲಿ ಈ ಬಂಧನವನ್ನು ಮಾಡಲಾಗಿದೆ.
ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಕಠಿಣ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ವಂಚನೆ ಜಾಲದಲ್ಲಿ ಭಾಗಿಯಾಗಿರುವ ಇlದರೆ ಕೆಲವು ಶಂಕಿತ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಈ ಪ್ರಕರಣದ ಸಂಪೂರ್ಣ ವಿವರಗಳನ್ನು ನೀಡುವುದಾದರೆ, ಭುವನೇಶ್ವರದ ನಿವಾಸಿಯಾದ ಬಿಜನ್ ಕುಮಾರ್ ಮಹಾಪಾತ್ರ ಎಂಬುವವರೇ ಈ ನಕಲಿ ವಂಚನೆ ಜಾಲಕ್ಕೆ ಬಲಿಯಾಗಿ ದೂರು ದಾಖಲಿಸಿದ ಸಂತ್ರಸ್ತರಾಗಿದ್ದಾರೆ. ಟಾಟಾ ಪವರ್ ಸೋಲಾರ್ ಸಿಸ್ಟಮ್ಸ್ ಲಿಮಿಟೆಡ್ ಹಾಗೂ ಟಾಟಾ 1ಎಂಜಿ ಹೆಲ್ತ್ ಕೇರ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳ ಅಧಿಕೃತ ವಿತರಕರ ಹಕ್ಕುಗಳು ಹಾಗೂ ಡಿಸ್ಟ್ರಿಬ್ಯೂಷನ್ ಫ್ರಾಂಚೈಸಿಯನ್ನು ನೀಡುವುದಾಗಿ ವಂಚಕರು ಈ ವ್ಯಕ್ತಿಯನ್ನು ಸಂಪರ್ಕಿಸಿದ್ದರು.
ಆರಂಭದಲ್ಲಿ ಇಮೇಲ್ ಮೂಲಕ ನಕಲಿ ವ್ಯವಹಾರದ ಪ್ರಸ್ತಾಪ ಮುಂದಿಟ್ಟ ವಂಚಕರು, ನಂತರ ತಮ್ಮ ಸಂಭಾಷಣೆಯನ್ನು ವಾಟ್ಸಾಪ್‌ಗೆ ಬದಲಾಯಿಸಿ ಸಂತ್ರಸ್ತರನ್ನು ಸಂಪೂರ್ಣವಾಗಿ ನಂಬಿಸುವಲ್ಲಿ ಯಶಸ್ವಿಯಾಗಿದ್ದರು. ವಂಚಕರ ಮಾತುಗಳನ್ನು ನಂಬಿದ ಸಂತ್ರಸ್ತರಿಗೆ ಅಪ್ಪಟ ಅಸಲಿ ವ್ಯವಹಾರದ ಪ್ರಸ್ತಾಪದಂತೆ ಭಾಸವಾಗುವ ನಕಲಿ ಕಾಗದಪತ್ರಗಳನ್ನು ಕಳುಹಿಸಲಾಗಿತ್ತು. ಇದರ ಬೆನ್ನಲ್ಲೇ ವಿವಿಧ ನೆಪಗಳೊಡ್ಡಿ ಹಂತ ಹಂತವಾಗಿ ಹಣ ವರ್ಗಾವಣೆ ಮಾಡುವಂತೆ ವಂಚಕರು ಒತ್ತಾಯಿಸಿದ್ದಾರೆ.
ನೋಂದಣಿ ಶುಲ್ಕ (Registration charges), ಒಪ್ಪಂದ ಪ್ರಕ್ರಿಯೆ ಶುಲ್ಕ (Agreement processing fees), ಸ್ಟಾಕ್ ಖರೀದಿ ವೇಚ, ದಾಸ್ತಾನು ವೆಚ್ಚ ಹಾಗೂ ಟಿಡಿಎಸ್ (TDS) ಸೇರಿದಂತೆ ವಿವಿಧ ತೆರಿಗೆ ಸಂಬಂಧಿತ ಪಾವತಿಗಳ ಹೆಸರಿನಲ್ಲಿ ಹಣವನ್ನು ಹಂತ ಹಂತವಾಗಿ ವರ್ಗಾಯಿಸುವಂತೆ ಕೇಳಲಾಗಿದೆ. ಸಂತ್ರಸ್ತರಿಗೆ ಇಡೀ ಪ್ರಕ್ರಿಯೆಯು ಸಂಪೂರ್ಣ ಕಾನೂನುಬದ್ಧವಾಗಿದೆ ಎಂಬ ನಂಬಿಕೆಯನ್ನು ಮೂಡಿಸಲು ಉದ್ದೇಶಪೂರ್ವಕವಾಗಿಯೇ ಇಂತಹ ಹಂತ ಹಂತದ ಪಾವತಿಗಳ ತಂತ್ರವನ್ನು ವಂಚಕರು ಬಳಸಿಕೊಂಡಿದ್ದಾರೆ.
ವಂಚಕರ ಈ ಮಾತುಗಳನ್ನು ಅಕ್ಷರಶಃ ನಂಬಿದ ಸಂತ್ರಸ್ತ ಬಿಜನ್ ಕುಮಾರ್ ಮಹಾಪಾತ್ರ ಅವರು ತಮ್ಮ ಪತ್ನಿಯ ಬ್ಯಾಂಕ್ ಖಾತೆಯಿಂದ ವಂಚಕರು ಒದಗಿಸಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ NEFT ಮೂಲಕ ಹಂತ ಹಂತವಾಗಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ನಕಲಿ ಟಾಟಾ ಪವರ್ ಸೋಲಾರ್ ಡಿಸ್ಟ್ರಿಬ್ಯೂಷನ್‌ಗಾಗಿ 10.97 ಲಕ್ಷ ರೂಪಾಯಿ ಹಾಗೂ ನಕಲಿ ಟಾಟಾ 1ಎಂಜಿ ಫ್ರಾಂಚೈಸಿಗಾಗಿ 4.21 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದು, ಒಟ್ಟು ವಂಚನೆಗೆ ಒಳಗಾದ ಮೊತ್ತ ಬರೋಬ್ಬರಿ 15,19,200 ರೂಪಾಯಿಗಳಾಗಿವೆ.
ಆದರೆ ಹಣ ಪಡೆದ ನಂತರ ವಂಚಕರು ಭರವಸೆ ನೀಡಿದಂತೆ ಯಾವುದೇ ಡಿಸ್ಟ್ರಿಬ್ಯೂಷನ್ ಅಥವಾ ಫ್ರಾಂಚೈಸಿಯನ್ನು ನೀಡಲಿಲ್ಲ. ಬದಲಿಗೆ ಕಂಪನಿಯ ಪ್ರತಿನಿಧಿಗಳೊಂದಿಗೆ ನಡೆಸುತ್ತಿದ್ದ ಸಂವಹನವು ಅನುಮಾನಾಸ್ಪದವಾಗಿ ಕಂಡುಬಂದಾಗ ತಮಗೆ ಮೋಸಹೋಗಿರುವುದು ಸಂತ್ರಸ್ತರಿಗೆ ಅರಿವಿಗೆ ಬಂದಿದೆ. ಕೂಡಲೇ ಎಚ್ಚೆತ್ತ ಸಂತ್ರಸ್ತರು ಭುವನೇಶ್ವರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ದಾಖಲಿಸಿದರು. ಪ್ರಕರಣದ ಗಂಭೀರತೆಯನ್ನು ಅರಿತ ತನಿಖಾಧಿಕಾರಿಗಳು ಆರ್ಥಿಕ ವಹಿವಾಟುಗಳು, ಸಂವಹನ ಮಾಧ್ಯಮಗಳು ಹಾಗೂ ಬ್ಯಾಂಕಿಂಗ್ ಡೇಟಾವನ್ನು ಕೂಲಂಕಷವಾಗಿ ಪರಿಶೀಲಿಸಿ, ಹಣದ ಜಾಡನ್ನು ಬೆನ್ನಟ್ಟಿ ಬಿಹಾರಕ್ಕೆ ತೆರಳಿ ಆರೋಪಿ ದಧಿಬಲ್ ಕುಮಾರ್ ಸಿಂಗ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯು ಇದೇ ರೀತಿಯ ನಕಲಿ ಫ್ರಾಂಚೈಸಿ ಆಫರ್‌ಗಳನ್ನು ಬಳಸಿ ಬೇರೆ ರಾಜ್ಯಗಳ ಇತರೆ ಉದ್ಯಮಿಗಳಿಗೂ ವಂಚನೆ ಎಸೆಗಿದ್ದಾನೆಯೇ ಎಂಬುದರ ಕುರಿತು ಪೊಲೀಸರು ಸದ್ಯ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ನೀಡಿರುವ ಸೈಬರ್ ಕ್ರೈಮ್ ತಜ್ಞ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಪ್ರೊ. ತ್ರಿವೇಣಿ ಸಿಂಗ್ ಅವರು, ವ್ಯವಸ್ಥಿತ ವಂಚಕರು ಈಗ ಹೂಡಿಕೆದಾರರನ್ನು ಆಕರ್ಷಿಸಲು ದೇಶದ ಪ್ರಮುಖ ಹಾಗೂ ಪ್ರತಿಷ್ಠಿತ ಕಂಪನಿಗಳ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಹೊಸ ಉದ್ಯಮಿಗಳು ಯಾವುದೇ ಫ್ರಾಂಚೈಸಿ ಅಥವಾ ಡಿಸ್ಟ್ರಿಬ್ಯೂಷನ್ ಆಫರ್‌ಗಳ ಮುಖೇನ ಹಣ ಪಾವತಿಸುವ ಮುನ್ನ, ಆಯಾ ಕಂಪನಿಗಳ ಅಧಿಕೃತ ವೆಬ್‌ಸೈಟ್‌ಗಳು ಹಾಗೂ ಅಧಿಕೃತ ಪ್ರತಿನಿಧಿಗಳ ಮೂಲಕ ಮಾತ್ರ ಖಚಿತಪಡಿಸಿಕೊಳ್ಳಬೇಕು ಎಂದು ಅವರು ಕಟ್ಟುನಿಟ್ಟಾಗಿ ಸಲಹೆ ನೀಡಿದ್ದಾರೆ. ಈ ಸೈಬರ್ ವಂಚನೆ ಜಾಲದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದು ತನಿಖೆಯಿಂದ ಹೊರಬರಲಿದ್ದು, ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
Comments
Please to leave a comment on this article.