ಜೀವನದಲ್ಲಿ ಯಶಸ್ಸು ಎನ್ನುವುದು ಕೇವಲ ಅದೃಷ್ಟವಂತರಿಗೆ ಅಥವಾ ಅತಿ ಹೆಚ್ಚು ಪ್ರತಿಭೆ ಇರುವವರಿಗೆ ಮಾತ್ರ ಸಿಗುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ನಿಜ ಹೇಳಬೇಕೆಂದರೆ, ಪ್ರತಿಭೆ, ಒಳ್ಳೆಯ ಶಿಕ್ಷಣ ಮತ್ತು ಸಿಕ್ಕ ಅವಕಾಶಗಳಿಗಿಂತಲೂ ನಾವು ಪ್ರತಿದಿನ ಮಾಡುವ ಸಣ್ಣಪುಟ್ಟ ಅಭ್ಯಾಸಗಳೇ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ಹೆಚ್ಚಿನ ಜನರು ಆರ್ಥಿಕವಾಗಿ ಕಷ್ಟಪಡುವುದಕ್ಕೆ ಅವರಲ್ಲಿ ಬುದ್ಧಿವಂತಿಕೆಯ ಕೊರತೆ ಕಾರಣವಲ್ಲ, ಬದಲಿಗೆ ಅವರು ರೂಢಿಸಿಕೊಂಡಿರುವ ಕೆಲವು ತಪ್ಪು ಹಣಕಾಸಿನ ಅಭ್ಯಾಸಗಳೇ ಅವರ ದೀರ್ಘಕಾಲಿಕ ಬೆಳವಣಿಗೆಗೆ ದೊಡ್ಡ ಅಡ್ಡಿಯಾಗಿರುತ್ತವೆ.

ಈ ತಪ್ಪುಗಳನ್ನು ಮೊದಲು ಗುರುತಿಸಿ, ಅವುಗಳನ್ನು ತಿದ್ದಿಕೊಂಡು ಉತ್ತಮ ಹಾದಿಯಲ್ಲಿ ಸಾಗಿದರೆ ಖಂಡಿತವಾಗಿಯೂ ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಹಾಗಾದರೆ ನಮ್ಮನ್ನು ಸದಾ ಹಣಕಾಸಿನ ಮುಗ್ಗಟ್ಟಿನಲ್ಲಿ ಸಿಲುಕಿಸುವ ಆ 5 ಕೆಟ್ಟ ಅಭ್ಯಾಸಗಳು ಯಾವುವು ಮತ್ತು ಅವುಗಳನ್ನು ಹೇಗೆ ಬದಲಾಯಿಸಿಕೊಳ್ಳಬೇಕು ಎಂಬುದನ್ನು ಈಗ ವಿವರವಾಗಿ ತಿಳಿಯೋಣ ಬನ್ನಿ.
ಮೊದಲನೆಯ ಪ್ರಮುಖ ಅಭ್ಯಾಸವೆಂದರೆ 'ಕೇವಲ ಹಣ ಉಳಿಸುವುದು, ಆದಾಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸದಿರುವುದು'. ಹಣವನ್ನು ಕೂಡಿಡುವುದು ಒಳ್ಳೆಯದೇ ಆದರೂ, ಕೇವಲ ಇರುವ ಹಣವನ್ನೇ ಉಳಿಸುತ್ತಾ ಕೂತರೆ ಜೀವನದಲ್ಲಿ ದೊಡ್ಡ ಮಟ್ಟದ ಬೆಳೆವಣಿಗೆ ಕಾಣಲು ಸಾಧ್ಯವಿಲ್ಲ. ಹಿತಕರವಾದ ಜೀವನ ನಡೆಸಲು ಹಣ ಖರ್ಚು ಮಾಡಬೇಕಾಗುತ್ತದೆ ಮತ್ತು ಹಣವನ್ನು ಸುರಕ್ಷಿತವಾಗಿಡಬೇಕು ನಿಜ, ಆದರೆ ಆದಾಯವನ್ನು ಹೆಚ್ಚಿಸಿಕೊಳ್ಳಲು ಯಾವುದೇ ಮಿತಿಯಿಲ್ಲ.
ಹೊಸ ಕೌಶಲ್ಯಗಳನ್ನು ಕಲಿಯುವುದು, ವಿವಿಧ ಕೋರ್ಸ್‌ಗಳ ಪ್ರಮಾಣಪತ್ರಗಳನ್ನು ಪಡೆಯುವುದು, ಸಣ್ಣದೊಂದು ಸೈಡ್ ಬ್ಯುಸಿನೆಸ್ ಮಾಡುವುದು ಅಥವಾ ಫ್ರೀಲ್ಯಾನ್ಸಿಂಗ್ ಕೆಲಸಗಳನ್ನು ಮಾಡುವ ಮೂಲಕ ನಿಮ್ಮ ಆದಾಯದ ಮೂಲವನ್ನು ವಿಸ್ತರಿಸಿಕೊಳ್ಳಬಹುದು. ನೀವು ಸೃಷ್ಟಿಸುವ ಮೌಲ್ಯ ಮತ್ತು ಸಂಪಾದಿಸುವ ಸಾಮರ್ಥ್ಯವೇ ನಿಮ್ಮ ಬಳಿ ಇರುವ ಅತ್ಯಮೂಲ್ಯ ಹಣಕಾಸಿನ ಆಸ್ತಿಯಾಗಿದೆ. ಕೇವಲ ಉಳಿತಾಯದ ಹಿಂದೆ ಬದಲು ಗಳಿಕೆಯನ್ನು ಹೆಚ್ಚಿಸಿಕೊಳ್ಳುವ ಕಡೆ ಗಮನಹರಿಸಿ.
ಎರಡನೆಯದಾಗಿ, 'ಯಾವುದೇ ಮಹತ್ವಾಕಾಂಕ್ಷೆಯಿಲ್ಲದ ವ್ಯಕ್ತಿಗಳೊಂದಿಗೆ ಒಡನಾಟ ಇಟ್ಟುಕೊಳ್ಳುವುದು'. ನಾವು ದಿನವಿಡೀ ಯಾರೊಂದಿಗೆ ಹೆಚ್ಚು ಸಮಯ ಕಳೆಯುತ್ತೇವೆಯೋ, ಅವರ ಆಲೋಚನಾ ಕ್ರಮ, ನಿರ್ಧಾರಗಳು ಮತ್ತು ನಿರೀಕ್ಷೆಗಳು ನಮ್ಮ ಮೇಲೂ ಖಂಡಿತವಾಗಿ ಪ್ರಭಾವ ಬೀರುತ್ತವೆ. ನಿಮ್ಮ ಸುತ್ತಮುತ್ತಲಿನ ವಾತಾವರಣವು ಬೆಳವಣಿಗೆಗೆ, ಮಹತ್ವಾಕಾಂಕ್ಷೆಗೆ ಅಥವಾ ಹೊಸ ವಿಷಯಗಳನ್ನು ಕಲಿಯಲು ಪ್ರೋತ್ಸಾಹಿಸದೆ ಇದ್ದರೆ, ಜೀವನದಲ್ಲಿ ಮುಂದುವರಿಯುವುದು ಕಷ್ಟವಾಗುತ್ತದೆ.
ಹಾಗಂದ ಮಾತ್ರಕ್ಕೆ ನಿಮ್ಮ ಸ್ನೇಹಿತರು ಅಥವಾ ಕುಟುಂಬದವರು ಕೆಟ್ಟವರೆಂದಲ್ಲ, ಆದರೆ ನಿಮ್ಮನ್ನು ಸದಾ ಉತ್ತಮ ಕೆಲಸಗಳಿಗೆ ಪ್ರೇರೇಪಿಸುವ ಜನರೊಂದಿಗೆ ಬೆರೆಯಲು ನೀವು ಪ್ರಯತ್ನಿಸಬೇಕು. ಒಳ್ಳೆಯ ಪುಸ್ತಕಗಳನ್ನು ಓದುವುದು, ಸಾಧಕರ ಮಾತುಗಳನ್ನು ಕೇಳುವುದು, ವೃತ್ತಿಪರ ಸಮುದಾಯಗಳೊಂದಿಗೆ ಗುರುತಿಸಿಕೊಳ್ಳುವುದು ಅಥವಾ ಸದಾ ಹೊಸದನ್ನು ಕಲಿಯಲು ಬಯಸುವ ಉದ್ಯಮಿಗಳೊಂದಿಗೆ ಸಂಪರ್ಕದಲ್ಲಿರುವುದು ನಿಮ್ಮಲ್ಲಿ ಹೊಸ ಆಲೋಚನೆಗಳನ್ನು ಹುಟ್ಟುಹಾಕುತ್ತದೆ.
ಮೂರನೆಯದಾಗಿ, 'ಯಾವುದೇ ರೀತಿಯ ಅಪಾಯವನ್ನು ಎದುರಿಸಲು ಹೆಕುವುದು ಮತ್ತು ಸಂಪೂರ್ಣವಾಗಿ ರಿಸ್ಕ್ ತೆಗೆದುಕೊಳ್ಳದಿರುವುದು'. ಸೋಲಿನ ಭಯದಿಂದ ಅನೇಕ ಜನರು ತಮ್ಮ ಕಂಫರ್ಟ್ ಜೋನ್‌ನಿಂದ (Comfort Zone) ಹೊರಬರಲು ಇಷ್ಟಪಡುವುದಿಲ್ಲ. ಆದರೆ ನೀವು ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಹೋದರೆ, ನಿಮ್ಮ ವೈಯಕ್ತಿಕ ಮತ್ತು ಆರ್ಥಿಕ ಬೆಳವಣಿಗೆಯೂ ಅಲ್ಲಿಯೇ ನಿಂತುಹೋಗುತ್ತದೆ.
ಯಶಸ್ವಿ ಉದ್ಯಮಿಗಳು ಅಥವಾ ಹೂಡಿಕೆದಾರರು ಯಾರೂ ಕೂಡ ತಮ್ಮ ಜೀವನದಲ್ಲಿ ಒಂದಲ್ಲ ಒಂದು ಹಂತದಲ್ಲಿ ಅನಿಶ್ಚಿತತೆಯನ್ನು ಎದುರಿಸಿದವರೇ ಆಗಿರುತ್ತಾರೆ. ಸರಿಯಾದ ಅಧ್ಯಯನ ಮತ್ತು ಮುಂಚಿತವಾದ ಯೋಜನೆಯೊಂದಿಗೆ ತೆಗೆದುಕೊಳ್ಳುವ ಲೆಕ್ಕಾಚಾರದ ಅಪಾಯಗಳು (Calculated Risks) ನಿಮ್ಮ ವೃತ್ತಿಜೀವನವನ್ನು ಉತ್ತಮಗೊಳಿಸುತ್ತವೆ, ಲಾಭದಾಯಕ ವ್ಯವಹಾರಗಳನ್ನು ಕಟ್ಟಿಕೊಡುತ್ತವೆ ಮತ್ತು ಉತ್ತಮ ಹೂಡಿಕೆಗೆ ದಾರಿ ಮಾಡಿಕೊಡುತ್ತವೆ. ಸೋಲಿನಿಂದ ಕಲಿಯುವ ಪಾಠವು ಯಶಸ್ಸಿನಷ್ಟೇ ಅಮೂಲ್ಯವಾಗಿರುತ್ತದೆ.
ನಾಲ್ಕನೆಯದಾಗಿ, 'ಯಾವುದೇ ಸ್ಪಷ್ಟ ಯೋಜನೆಯಿಲ್ಲದೆ ಜೀವನ ನಡೆಸುವುದು'. ಯಾವುದೇ ನಿರ್ದಿಷ್ಟ ಗುರಿ ಅಥವಾ ಯೋಜನೆಯಿಲ್ಲದೆ ಮುನ್ನಡೆದರೆ, ಜೀವನದ ನಾನಾ ರೀತಿಯ ಗೊಂದಲಗಳಲ್ಲಿ ಸಿಲುಕಿ ಮಹತ್ವದ ಸಾಧನೆ ಮಾಡುವುದನ್ನು ಮರೆತುಬಿಡುತ್ತೇವೆ. ಆರ್ಥಿಕ ಗುರಿಗಳು, ಸರಿಯಾದ ಬಜೆಟ್ ನಿರ್ವಹಣೆ, ಸಮಯದ ಸದ್ಬಳಕೆ ಮತ್ತು ನಿಮ್ಮ ಪ್ರಗತಿಯನ್ನು ಆಗಾಗ ಪರಿಶೀಲಿಸುವುದು ಯಶಸ್ವಿ ಜೀವನದ ಪ್ರಮುಖ ಭಾಗಗಳಾಗಿವೆ. ನೀವು ಸ್ವಂತ ಮನೆ ಖರೀದಿಸಬೇಕೆಂದಿರಲಿ, ಹೊಸ ಬ್ಯುಸಿತೆಸ್ ಆರಂಭಿಸಬೇಕೆಂದಿರಲಿ ಅಥವಾ ಆರ್ಥಿಕವಾಗಿ ಸ್ವತಂತ್ರರಾಗಬೇಕೆಂದಿರಲಿ, ಲಿಖಿತ ರೂಪದ ಯೋಜನೆಯು ನಿಮಗೆ ಸ್ಪಷ್ಟ ದಿಕ್ಕನ್ನು ಮತ್ತು ಜವಾಬ್ದಾರಿಯನ್ನು ನೀಡುತ್ತದೆ. ಪ್ರತಿದಿನ ನೀವು ತೆಗೆದುಕೊಳ್ಳುವ ಸಣ್ಣ ಹಾಗೂ ಸ್ಥಿರವಾದ ನಿರ್ಧಾರಗಳು ದೀರ್ಘಕಾಲದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತವೆ.
ಐದನೆಯ ಮತ್ತು ಅಂತಿಮವಾಗಿ, 'ತುಂಬಾ ಚಿಕ್ಕದಾಗಿ ಆಲೋಚಿಸುವುದು ಮತ್ತು ನಿಮ್ಮ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡಿಕೊಳ್ಳುವುದು'. ನಿಮ್ಮ ಯಶಸ್ಸಿನ ದೃಷ್ಟಿಕೋನ ಹೇಗಿರುತ್ತದೆಯೋ ನಿಮ್ಮ ಜೀವನವೂ ಹಾಗೆಯೇ ರೂಪುಗೊಳ್ಳುತ್ತದೆ. ನಿಮ್ಮ ಮೇಲಿನ ನಂಬಿಕೆ ಕಡಿಮೆಯಿದ್ದು, ನಿಮ್ಮ ಸಾಮರ್ಥ್ಯವನ್ನು ನೀವು ಕೇವಲವಾಗಿ ನೋಡಿಕೊಂಡರೆ ಸಿಗಬಹುದಾದ ಉತ್ತಮ ಅವಕಾಶಗಳನ್ನೂ ಕಳೆದುಕೊಳ್ಳುತ್ತೀರಿ. ಆದರೆ ದೊಡ್ಡದಾದ ಹಾಗೂ ಸಾಧಿಸಬಹುದಾದ ಗುರಿಗಳನ್ನು ಹಾಕಿಕೊಂಡಾಗ, ಕಲಿಯುವ ಉತ್ಸಾಹ ಹೆಚ್ಚಾಗುತ್ತದೆ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ದೊಡ್ಡದಾಗಿ ಆಲೋಚಿಸುವುದು ಅಂದರೆ ಅಹಂಕಾರದಿಂದ ಇರುವುದಲ್ಲ, ಬದಲಾಗಿ ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ಅಪಾರ ನಂಬಿಕೆ ಇರುವುದು ಎಂದರ್ಥ. ನಿಮ್ಮ ಮಾನದಂಡಗಳನ್ನು ಹೆಚ್ಚಿಸಿಕೊಂಡು ಹೊಸ ಅವಕಾಶಗಳನ್ನು ಹುಡುಕಿದಾಗ, ಹಿಂದೆಂದೂ ಮಾಡದಂತಹ ಅದ್ಭುತ ಕೆಲಸಗಳನ್ನು ನೀವು ಸಾಧಿಸಲು ಸಾಧ್ಯವಾಗುತ್ತದೆ.
ಸಂಪತ್ತು ಗಳಿಕೆ ಎನ್ನುವುದು ಒಂದೇ ದಿನದಲ್ಲಿ ಅದೃಷ್ಟದಿಂದ ಅಥವಾ ಒಂದೇ ಒಂದು ದೊಡ್ಡ ಅವಕಾಶದಿಂದ ಸಿಗುವಂಥದ್ದಲ್ಲ. ಅದು ಶಿಸ್ತಿನ ಅಭ್ಯಾಸಗಳು, ನಿರಂತರ ಕಲಿಕೆ, ಸ್ಮಾರ್ಟ್ ಹಣಕಾಸು ನಿರ್ವಹಣೆ ಮತ್ತು ಪರಿಶ್ರಮದ ಫಲವಾಗಿದೆ. ಆರ್ಥಿಕ ಪರಿಸ್ಥಿತಿ ಹಾಗೂ ವೈಯಕ್ತಿಕ ಕಾರಣಗಳು ನಮ್ಮ ಕೈಯಲ್ಲಿಲ್ಲದಿದ್ದರೂ, ನಾವು ಪ್ರತಿದಿನ ತೆಗೆದುಕೊಳ್ಳುವ ಹಣಕಾಸಿನ ನಿರ್ಧಾರಗಳು ನಮ್ಮ ಕೈಯಲ್ಲಿಯೇ ಇರುತ್ತವೆ. ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಿ, ಮಹತ್ವಾಕಾಂಕ್ಷೆಯ ಜನರಿಂದ ಕಲಿಯಿರಿ, ಲೆಕ್ಕಾಚಾರದ ರಿಸ್ಕ್ ತೆಗೆದುಕೊಳ್ಳಿ, ಸರಿಯಾದ ಯೋಜನೆಯೊಂದಿಗೆ ಬದುಕಿ ಮತ್ತು ನಿಮ್ಮ ಸಾಮರ್ಥ್ಯವನ್ನು ನಂಬಿ. ಈ ಸಣ್ಣ ಬದಲಾವಣೆಗಳು ನಿಮ್ಮ ಹಣಕಾಸಿನ ಒಟ್ಟು ಚಿತ್ರಣವನ್ನು ಬದಲಾಯಿಸಿ ಸುಂದರವಾದ ಭವಿಷ್ಯವನ್ನು ಕಲ್ಪಿಸಿಕೊಡುತ್ತವೆ.
Comments
Please to leave a comment on this article.